ಬೆಳಗ್ಗೆ 7-30 ರ ಸಮಯ ಚುಮು ಚುಮು ಚಳಿ ಆಗತಾನೆ ರಥವೇರಿ ಹೊರಟ ಸೂರ್ಯನ ಕಿರಣಗಳಿಂದ ಮೈ ಮನಸ್ಸಿಗೆ ಹಿತವೆನಿಸುತ್ತಿತ್ತು. ಹೊಂಬಣ್ಣದ ಬಿಸಿಲು ನೆಲಮಂಗಲದ ಡಬಲ್ ರೋಡ್ ಮೇಲೆ ಬೀಳುತಿತ್ತು.
ಅಷ್ಟೋತ್ತಿಗಾಗಲೇ ಅಲ್ಲಿ ಕೆಲಸ ಪ್ರಾರಂಭಿಸಿದ್ದರು. ಪೀಣ್ಯಾದಿಂದ ನೆಲಮಂಗಲದವರೆಗೂ ಡಬಲ್ ರೋಡ್ ಮಾಡಲು ಕಾಮಗಾರಿ ಶುರುವಾಗಿದ್ದ ದಿನಗಳು.
ಸುಮಾರು ಎಂಭತ್ತರ ದಶಕವದು. ಇಂದಿನ ಹಾಗೆ ಬೆಂಗಳೂರು ಬೆಟ್ಟದಷ್ಟು ಬೆಳೆದಿರಲಿಲ್ಲ. ಅಲ್ಲದೆ ಈಗಿರುವ ತಾಂತ್ರಿಕತೆಯು ಇರಲಿಲ್ಲ. ಎಲ್ಲಾ ಕೆಲಸಕ್ಕೂ ಕೂಲಿ ಆಳುಗಳನ್ನು ಅವಲಂಭಿಸಿತ್ತು. ರಸ್ತೆಯ ಕಾಮಗಾರಿ ಕೆಲಸ ಅಂದರೆ ಬಹಳ ಶ್ರಮದ ಕೆಲಸ.
ಇಂಥಾ ಕಷ್ಟದ ಕೆಲಸಗಳಿಗೆ ಉತ್ತರ ಕನರ್ಾಟಕದಿಂದ ಗುಳೆ ಬಂದ ಜನಗಳೇ ಜಾಸ್ತಿ ಇರುತ್ತಿದ್ದರು. ಯಾಕೆಂದರೆ ಬೇಸಿಗೆ ಕಾಲದಲ್ಲಿ ಕುಡಿಯಲು ನೀರು ಇಲ್ಲದೆ, ಬಡತನದ ಬೇಗೆಯಲ್ಲಿ ಬೆಂದು ಹೊಟ್ಟೆಗೆ ಅನ್ನವಿಲ್ಲದೆ, ಬೆಂಗಳೂರಿನ ಕಡೆಗೆ ವಲಸೆ ಬರುತ್ತಿದ್ದರು. ಹಾಗೇ ಬಂದವರೆಲ್ಲಾ ಬಹುತೇಕ ಜನರು ಅನಕ್ಷರಸ್ಥರು ಮತ್ತು ಮುಗ್ಧರು. ಪಾಪ ಅವರಿಗೆ ಈ ಬೆಂಗಳೂರಿನ ತಗಾಬಿಗಿ ಅರ್ಥವಾಗುತ್ತಿರಲಿಲ್ಲ. ಮೇಸ್ತ್ರಿಗಳು ಕೊಟ್ಟ ಹಣವನ್ನು ಸಿರಿ ಎಂದು ಭಾವಿಸಿ, ಹಗಲು -ರಾತ್ರಿ ಎನ್ನದೆ, ಮಳೆಗಾಳಿಯನ್ನು ಲೆಕ್ಕಿಸದೆ, ದುಡಿಯುತ್ತಿದ್ದರು. ಇವರೆಲ್ಲರೂ ಅಲ್ಲಿಯೇ ರಸ್ತೆಪಕ್ಕದಲ್ಲಿ ಗುಡಿಸಲುಗಳನ್ನು ನಿಮರ್ಿಸಿಕೊಂಡು ಅನ್ನವನ್ನೋ, ಗಂಜಿಯನ್ನೋ ಬೇಯಿಸಿಕೊಂಡು, ಮಕ್ಕಳು ಮರಿಗಳನ್ನು ಎಳೆದಾಡಿಕೊಂಡು, ಹೆಂಡತಿ, ತಂಗಿ, ತಮ್ಮ ತಂದೆ-ತಾಯಿ ಹೀಗೆ ಅವರವರ ಸಂಬಂಧಗಳೊಡನೆ ಬದುಕುವವರು. ಎಂದಿನಂತೆ ಆ ದಿನ ಬೆಳಗ್ಗೆನೇ ರಸ್ತೆಯ ಕೆಲಸ ಪ್ರಾರಂಭಿಸದ್ದರು. ಸುಮಾರು ಇಪ್ಪತ್ತೈದರಿಂದ ಮೂವತ್ತು ಜನಗಳು ಕೆಲಸ ಮಾಡುತ್ತಿದ್ದರು. ರೋಡ್ ಕೆಲಸ ಮಾಡುವಾಗ ಡಬಲ್ರೋಡ್ ಆದ್ದರಿಂದ, ಒಂದು ಭಾಗವನ್ನು ಕ್ಲೋಸ್ ಮಾಡಿ ಇನ್ನೊಂದು ಕಡೆ ವಾಹನಗಳು ಓಡಾಡಲು ಬಿಟ್ಟಿದ್ದರು. ರೋಡ್ ಮಧ್ಯಭಾಗಕ್ಕೆ ಟಾರ್ ಡ್ರಮ್ಗಳನ್ನು ಸಹ ಇಟ್ಟಿದ್ದರು.
ಹಿಂದೆ ರಸ್ತೆಗೆ ಡಾಂಬರು ಹಾಕುವುದು ಕೈ ಕೆಲಸವಾಗಿತ್ತು. ಆದ್ದರಿಂದ ಪ್ರತಿಯೊಂದು ಹಂತದಲ್ಲೂ ಜನಗಳೇ ಬೇಕಾಗಿತ್ತು. ಸ್ವಲ್ಪ ತ್ರಾಸಿನ ಕೆಲಸವೇ ಆಗಿತ್ತು. ಹೀಗೆ ಕೆಲಸ ಬರದಿಂದ ಸಾಗಿತ್ತು. ವಾಹನಗಳು ಎಂದಿನಂತೆ ತಮಗೆ ಮೀಸಲಿಟ್ಟ ದಾರಿಯಲ್ಲಿಯೇ ಚಲಿಸುತ್ತಿದ್ದವು. ಸುಮಾರು 8 ರ ಸಮಯವಿರಬೇಕು. ಬೆಂಗಳೂರಿನಿಂದ ರಾಯಚೂರಿಗೆ ಹೊರಟ ಬಸ್ಸು ಮೆಜೆಸ್ಟಿಕ್ನಿಂದ ಹೊರಟು ನೆಲಮಂಗಲದ ಹತ್ತಿರಕ್ಕೆ ಬರುತ್ತಿತ್ತು. ಎಲ್ಲಾ ವಾಹನಗಳಂತೆ ಆ ಬಸ್ಸು ನಿಗಧಿಪಡಿಸಿದ ದಾರಿಯಲ್ಲಿ ಹೋಗಲಿಲ್ಲ. ಬರುತ್ತಾ ಬರುತ್ತಾ ಬಂದಿದ್ದೇ ರೋಡಿನ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಎಂಟು ಜನ ಅಮಾಯಕ ಕೂಲಿ ಕೆಲಸದವರ ಮೇಲೆ ಮೃತ್ಯುದೇವ ಯಮನಂತೆ ಬಂದು ಅವರ ಪ್ರಾಣವನ್ನು ಹಾರಿಸಿಬಿಟ್ಟಿತು. ನೋಡು ನೋಡುತಿದ್ದಂತೆ ಕೆಲವೇ ನಿಮಿಷಗಳಲ್ಲಿ ಈ ಅವಘಡ ಸಂಭವಿಸಿ ಹೋಗಿತ್ತು.
ಬಡತನದ ಬೇಗೆಗೆ ಹೊಟ್ಟೆ ಹೊರೆಯಲು ಬಂದ ಮುಗ್ಧ ಅಮಾಯಕ ಜೀವಗಳು ತಮ್ಮದಲ್ಲದ ತಪ್ಪಿಗೆ ಅನ್ಯಾಯವಾಗಿ ಪ್ರಾಣ ತೆತ್ತರು. ಈ ಘೋರ ಬೀಭತ್ಯ ದೃಶ್ಯವನ್ನು ಕಣ್ಣೆದುರೆ ಕಂಡ ಅವರ ಸಂಬಂಧಿಗಳ ರೋದನ ಮುಗಿಲು ಮುಟ್ಟಿತು. ಅಲ್ಲದೆ ಜನರಿಗೆ ಏನು ಮಾಡಬೇಕು ? ಎಂಬುದು ತೋಚದೆ ಒಂದು ಕ್ಷಣ ಎಲ್ಲಾ ಸ್ತಬ್ಧರಾಗಿ ಬಿಟ್ಟರು.
ಬಸ್ಸು ಕೂಲಿ ಜನಗಳ ದೇಹಗಳ ಮೇಲೆ ಹರಿದು ಅವರ ರಕ್ತದಲ್ಲಿ ಓಕುಳಿಯಾಡಿ ಸ್ವಲ್ಪ ದೂರಕ್ಕೆ ಹೋಗಿ ನಿಂತಿತ್ತು. ಬಸ್ಸಿನಲ್ಲಿ ಇದ್ದ ಜನಗಳೆಲ್ಲಾ ಗಾಬರಿಯಿಂದ ಕೆಳಗಿಳಿದರು ಡ್ರೈವರ್ ಮಾತ್ರ ಬಸ್ಸಲ್ಲೇ ಕುಳಿತುಕೊಂಡಿದ್ದನು. ಅವನ ಮುಖ ಬಿಳಿಚಿಕೊಂಡಿತ್ತು. ಗಾಬರಿಯಿಂದ ಕೈ ಕಾಲುಗಳು ಅದುರುತ್ತಿದ್ದವು. ರೋಡ್ ಕೆಲಸದ ಕೆಲವು ಜನಗಳು ಹೋಗಿ ಅವನನ್ನು ಬಸ್ಸಿನಿಂದ ಹೊರಗೆ ಎಳೆದರು. ಆಗಲೇ ಕೆಲವರು ತಮ್ಮ ಅಕ್ರೋಶವನ್ನು ಬಸ್ಸನ ಮೇಲೆ ತೀರಿಸಲಾರಂಭಿಸಿದರು. ಇನ್ನೂ ಕೆಲವರು ಡ್ರೈವರ್ಗೆ ಧರ್ಮದೇಟು
ನೀಡಲು ಮುಂದಾಗಿದ್ದರು. ಬಸ್ಸಿನಲ್ಲಿ ಬಂದಿದ್ದ ಕೆಲಸವರು ಡ್ರೈವರನ್ನು ಕೂಲಿ ಕೆಲಸದವರಿಂದ ಬಿಡಿಸಿ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ ಕೂರಿಸಿದ್ದರು. ಅವರಲ್ಲೊಬ್ಬರು ಹೋಗಿ ಟ್ರಾಫಿಕ್ ಪೋಲೀಸರಿಗೆ ಪೋನ್ ಮಾಡಿದ್ದರು.
ಅರ್ಧಗಂಟೆಯಲ್ಲೇ ಬಂದರು ಟ್ರಾಫಿಕ್ ಪೋಲೀಸ್ ಮತ್ತು ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಅ್ಯಂಬುಲೆನ್ಸ್ ಸಮೇತ ಪೋಲೀಸ್ನವರು ಬಂದಿದ್ದೇ ಮೊದಲು ಡ್ರೈವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಬಸ್ಸನ್ನು ಸೀಜ್é್ ಮಾಡಿ, ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋದರು. ನಿಜಕ್ಕೂ ಆ ದಿನ ಬೆಂಗಳೂರಿಗೆ ದೊಡ್ಡ ಕರಾಳ ದಿನವಾಗಿತ್ತು.
ಡ್ರೈವರನ್ನು ಕರೆದುಕೊಂಡು ಹೋದ ಪೊಲೀಸ್ರು ಸ್ಟೇಷನ್ನಲ್ಲಿ ಸೆಲ್ನ ಒಳಗೆ ಹಾಕಿದರು. ವಿಷಯ ತಿಳಿದ ರಸ್ತೆ ಸಾರಿಗೆ ನಿಗಮದ ಉನ್ನತಾಧಿಕಾರಿಗಳು ಡ್ರೈವರ್ನ ಫೈಲ್ ಸಮೇತ ಬಂದರು. ಬಂದವರೇ ಸಬ್ ಇನ್ಸ್ಪೆಕ್ಟರ್ ಜೊತೆ ಸ್ವಲ್ಪ ಸಮಯದವರೆಗೂ ಮಾತನಾಡಿದರು. ಸಬ್ಇನ್ಸ್ಪೆಕ್ಟರ್ ಡ್ರೈವರ್ನ ಉದ್ಯೋಗದ ಫೈಲ್ನ್ನು ಕೂಲಂಕುಷವಾಗಿ ತಿರುವಿ ಹಾಕಿದರು ನೋಡಿದರೆ, ಆ ಡ್ರೈವರ್ನ ಸವರ್ಿಸ್ನಲ್ಲಿ ಎಲ್ಲೂ ಒಂದು ಕಪ್ಪು ಚುಕ್ಕೆ ಸಹ ಇಲ್ಲ. ಇದುವರೆಗೂ ಒಂದು ಸಣ್ಣ ಅಪಘಾತವನ್ನಾಗಲಿ ಅಥವಾ ಅವನ ನಡೆವಳಿಕೆಯಲ್ಲಾಗಲಿ ಯಾವ ತಪ್ಪು ಇರಲಿಲ್ಲ. ಅಂತಹದರಲ್ಲಿ ಈವಾಗ 8 ಜನರನ್ನು ಬಲಿ ತೆಗೆದುಕೊಂಡನಲ್ಲಾ? ಎಂದು ತುಂಬಾ ಆಶ್ಚರ್ಯವಾಯಿತು ಇನ್ಸ್ಪೆಕ್ಟರ್ಗೆ. ಸುಮಾರು 2 ರಿಂದ 3 ಗಂಟೆಗಳ ಕಾಲ ಆ ಡ್ರೈವರನ್ನು ಮಾತನಾಡಿಸಲಿಕ್ಕೆ ಹೋಗದೆ ಸುಮ್ಮನೆ ಇದ್ದರು. ಡ್ರೈವರ್ ಮಾತ್ರ ತಗ್ಗಿಸಿದ ತಲೆಯನ್ನು ಎತ್ತದೆ, ತಲೆ ಮೇಲೆ ಕೈ ಹೊತ್ತು ಗರಬಡಿದವನಂತೆ ಕುಳಿತೇ ಇದ್ದನು.
ಸ್ವಲ್ಪ ಸಮಯದ ನಂತರ ಸಬ್ ಇನ್ಸ್ಪೆಕ್ಟರ್ ತಮ್ಮ ಕೋಣೆಗೆ ಡ್ರೈವರ್ನನ್ನು ಕರೆತರಲು ಪೋಲೀಸ್ ಕಾನ್ಸ್ಟೇಬಲ್ಗೆ ಹೇಳಿದರು. ಹಾಗೆ ಒಂದು ಟೀಯನ್ನು ಸಹ ತರಲು ಹೇಳಿದರು. ಡ್ರೈವರ್ ಇನ್ಸ್ಪೆಕ್ಟರ್ನ ಕೋಣೆಗೆ ಹೋದವನೇ ಅವರ ಎದುರು ತಲೆ ತಗ್ಗಿಸಿ ನಿಂತುಕೊಂಡನು. ಇನ್ಸ್ಪೆಕ್ಟರ್ ವಿಚಾರಣೆ ಶುರು ಮಾಡಿದರು. ಸಬ್ ಇನ್ಸ್ಪೆಕ್ಟೆರ್ ಬಹಳ ಬುದ್ದಿವಂತರು ಮತ್ತು ಜಾಣ್ಮೆವುಳ್ಳವರು. ಈ ತರಹದ ಎಷ್ಟೋ ಕೇಸ್ಗಳನ್ನು ಸಲೀಸಾಗಿ ಬಿಡಿಸಿದ್ದರು. ಅಪರಾಧಿಗಳಿಂದ ಸತ್ಯವನ್ನು ಹೇಗೆ ಬಾಯಿ ಬಿಡಿಸಬೇಕೆಂದು ಅವರಿಗೆ ತಿಳಿದಿತ್ತು. ಮೊದಲು ಡ್ರೈವರ್ನ್ನು ಕುಚರ್ಿಯಲ್ಲಿ ಕೂರಲು ಹೇಳಿದರು. ಡ್ರೈವರ್ ಮಾತ್ರ ಹಾಗೆ ನಿಂತೆ ಇದ್ದನು. ಸಬ್ಇನ್ಸ್ಪೆಕ್ಟರ್ ಪರವಾಗಿಲ್ಲ ಕುಳಿತುಕೋ ಎಂದು ಡ್ರೈವರ್ನ ಕೈ ಹಿಡಿದು ಕೂರಿಸಿದರು.
ಅಷ್ಟೋತ್ತಿಗೆ ಪೋಲೀಸ್ ಕಾನ್ಸ್ಟೇಬಲ್ ಟೀಯನ್ನು ಹಿಡಿದುಕೊಂಡು ಕೋಣೆಯ ಒಳಗೆ ಬಂದು ಟೇಬಲ್ ಮೇಲೆ ಇಟ್ಟವನೇ ಒಮ್ಮೆ ಸಾಹೇಬರನ್ನು ನೋಡಿ ಮುಂದೆ ಏನು? ಎಂದು ಕಣ್ಣಲ್ಲೇ ಕೇಳಿದನು. ಸಬ್ಇನ್ಸ್ಪೆಕ್ಟರ್ ಬಾಗಿಲು ಹಾಕಿಕೊಂಡು ಹೊರಗೆ ಕಾದಿರು. ಯಾರೇ ಬಂದರೂ ಒಳಗೆ ಬಿಡಬೇಡ ಎಂದು ಅಜ್ಞಾಪಿಸಿದರು. ಡ್ರೈವರ್ಗೆ ಟೀ ಕುಡಿಯಲು ಹೇಳಿದರು. ಆದರೆ ಡ್ರೈವರ್ ಮಾತ್ರ ಮಂಕು ಕವಿದವನ ತರಹ ಕುಳಿತುಕೊಂಡಿದ್ದನು. ಸಬ್ಇನ್ಸ್ಪೆಕ್ಟರ್ನ ಬಲವಂತದ ಮೇರೆಗೆ ಟೀ ಕುಡಿದನು. ಹಾಗೆಯೇ ಸಬ್ಇನ್ಸ್ಪೆಕ್ಟರ್ ಪುನಃ ವಿಚಾರಣೆ ಶುರು ಮಾಡಿದರು.
ನಿನ್ನ ಹೆಸರು ಏನು? ಡ್ರೈವರನ ಮಾತಿಲ್ಲ. ಸುಮ್ಮನೇ ಕುಳಿತೆ ಇದ್ದ. ಸಬ್ಇನ್ಸ್ಪೆಕ್ಟರ್ ಸ್ವಲ್ಪ ಜೋರಾಗಿ ನೋಡಪ್ಪಾ ಈಗ ನಾನು ಕೇಳೋ ಪ್ರಶ್ನೆಗಳಿಗೆ ಸರಿಯಾಗಿ ಪಟಪಟ ಉತ್ತರ ಹೇಳಬೇಕು ಗೊತ್ತಾಯಿತಾ? ಎಂದು ಗದರಿಸಿದರು. ಡ್ರೈವರ್ ಅವಾಗ ನಿಧಾನವಾಗಿ ತಲೆ ಎತ್ತಿದವನೇ
ಶಂಕರಪ್ಪ-ಸಾರ್ ಎಂದನು.
ನಿನ್ನ ವಯಸ್ಸು ಎಷ್ಟು?
ನಲವತ್ತೆರಡು ವರ್ಷ ಸಾರ್
ಈಗ ಹೇಳು ನಿನ್ನ ಇಪ್ಪತ್ತು ವರ್ಷಗಳ ಸವರ್ಿಸ್ನಲ್ಲಿ ಎಲ್ಲೂ ಒಂದು ಸಣ್ಣ ಆಕ್ಸಿಡೆಂಟ್ ಮಾಡಿದ ನೀನು, ಈ ದಿನ ಅನ್ಯಾಯವಾಗಿ ಆ ಎಂಟು ಜನ ಬಡಪಾಯಿಗಳ ಮೇಲೆ ಬಸ್ಸನ್ನು ಏಕೆ ಹತ್ತಿಸಿದೆ? ಯಾಕೆ ಬಸ್ಸ್ನ ಬ್ರೇಕ್ ಫೇಲ್ ಆಯಿತಾ? ಅಥವಾ ಬಸ್ನಲ್ಲಿ ಯಾವುದಾದರೂ ಟೆಕ್ನಿಕಲ್ ಪ್ರಾಬ್ಲಂ ಆಯಿತಾ? ಇಲ್ಲಾ ರೋಡ್ನಲ್ಲಿ ಯಾರಾದರೂ ಅಡ್ಡ ಬಂದರಾ?
ಅದ್ಯಾವುದೂ ಇಲ್ಲಾ ಸಾರ್
ಮತ್ತೆ ಯಾಕೆ ಆ ಜನಗಳ ಮೇಲೆ ಬಸ್ ಹತ್ತಿಸಿದೆ? ಎಂದರು.
ಡ್ರೈವರ್ ಒಂದು ಕ್ಷಣ ಸಬ್ ಇನ್ಸ್ಪೆಕ್ಟರ್ ಮುಖ ನೋಡಿ, ಮತ್ತೆ ತಲೆ ತಗ್ಗಿಸಿಕೊಂಡು ಒಂದೇ ಸಮನೆ ಅಳಲು ಶುರು ಮಾಡಿದನು, ಇದನ್ನು ಕಂಡ ಸಬ್ಇನ್ಸ್ಪೆಕ್ಟರ್ಗೆ ಏನು ಹೇಳಲು ತೋಚದೆ ಒಂದು ಕ್ಷಣ ಮೌನವಾಗಿ, ಆ ಡ್ರೈವರ್ನ ಭುಜದ ಮೇಲೆ ಕೈ ಹಾಕಿ ಸಮಾಧಾನಪಡಿಸಿ ಮಾತು ಮುಂದುವರೆಸಿದರು. ನೋಡಯ್ಯ ನೀನು ಹೀಗೆ ಅಳುವುದರಿಂದ ಯಾವ ಪ್ರಯೋಜನವಿಲ್ಲ. ಸತ್ತ ಆ ಜೀವಗಳು ಬದುಕಿ ಬರುವುದಿಲ್ಲ. ನಿಜ ಹೇಳು ಯಾಕೆ ಹಾಗೆ ಮಾಡಿದೆ? ಎಂದರು.
ಡ್ರೈವರ್ ಸಾರ್ ನಿನ್ನೆ ಸಂಜೆ ಡ್ಯೂಟಿ ಮುಗಿಸಿಕೊಂಡು ಬಂದ ನಾನು ಇಡೀ ರಾತ್ರಿ ಮಲಗಲಿಲ್ಲ ಪುನಃ ಬೆಳಗ್ಗೆ ಐದು ಗಂಟೆಗೆ ಮನೆ ಬಿಟ್ಟು ಡಿಪೋಗೆ ಬಂದು ಡ್ಯೂಟಿಗೆ ಬಂದು 6-30 ಕ್ಕೆಲ್ಲಾ ಬಸ್ಸನ್ನು ಮೆಜೆಸ್ಟಿಕ್ನಿಂದ ತೆಗೆದುಕೊಂಡು ಬಂದೆ ಸಾರ್. ಅಲ್ಲಿಂದ ಸರಿಯಾಗಿಯೇ ಬಂದೆ ಸಾರ್. ಪೀಣ್ಯ ಬಿಟ್ಟು ನೆಲಮಂಗಲದ ಕಡೆಗೆ ಬರುವಾಗ ರಸ್ತೆಯಲ್ಲಿ ಟ್ರಾಫಿಕ್ ಸಹ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ತೂಕಡಿಕೆ ಬಂದಂತೆ ಆಯಿತು. ಹಾಗೇ ಕಣ್ಣನ್ನು ಸವರಿಕೊಂಡು ಗಾಡಿ ಓಡಿಸುತ್ತಾನೇ ಇದ್ದೆ. ಸ್ವಲ್ಪ ಹೊತ್ತಿನಲ್ಲೇ ನನ್ನ ಕಣ್ಣುಗಳು ಏಕೋ ಮಂಜಾದ ಹಾಗೆ ಆದವು. ಕೈ ಕಾಲುಗಳು ನನ್ನ ಹತೋಟಿ ಕಳೆದುಕೊಂಡಂತಾಯಿತು. ನನ್ನ ಬುದ್ದಿಗೆ ಮಂಕು ಕವಿದಾಗೆ ಆಯಿತು. ನೋಡು ನೋಡುತ್ತಿದ್ದ ಹಾಗೇ ನಾನು ಏನು ಮಾಡುತ್ತಿದ್ದೇನೆ ಎಂದು ತಿಳಿಯುವಷ್ಟರಲ್ಲೇ ಈ ಆಕ್ಸಿಡೆಂಟ್ ನಡೆದೇ ಹೋಯಿತು ಸಾರ್ ಎಂದನು. ನಾನು ಬೇಕೆಂದು ಈ ಪಾಪದ ಕೃತ್ಯವನ್ನು ಮಾಡಲಿಲ್ಲ ಸಾರ್. ನಾನು ಮಾಡಿರೋ ಈ ತಪ್ಪಿಗೆ ಯಾವ ಶಿಕ್ಷೆಯನ್ನಾದರೂ ಕೊಡಿ, ನನ್ನನ್ನು ಚೆನ್ನಾಗಿ ಹೊಡಿಯಿರಿ, ನನ್ನನ್ನು ಸಾಯಿಸಿಬಿಡಿ ಸಾರ್ ಎಂದು ಪಶ್ಚಾತ್ತಾಪದಿಂದ ಗೋಗರೆದು ಅಳತೊಡಗಿದನು.
ಅವನ ಮಾತು ಕೇಳದ ಸಬ್ಇನ್ಸ್ಪೆಕ್ಟರ್ ಅಲ್ಲಾ ಕಣ್ಣಯ್ಯ ನಿನ್ನ ಬೇಜವಾಬ್ದಾರಿತನದಿಂದ ಆ ಎಂಟು ಜನರನ್ನು ಕೊಂದು ಬಿಟ್ಟಲ್ಲಯ್ಯ? ನಿನ್ನ ಅವಿವೇಕತನ, ನಿರ್ಲಕ್ಷ್ಯದಿಂದ ಅನ್ಯಾಯವಾಗಿ ಮಾಡದ ತಪ್ಪಿಗೆ ನಿನಗೆ ಶಿಕ್ಷೆ ಖಂಡಿತ ಇದೆ. ಆದರೆ ನೀನು ಹೀಗೆ ಯಾಕೆ ಮಾಡಿದೆ? ಡ್ಯೂಟಿ ಮಾಡಲು ಇಷ್ಟವಿಲ್ಲದಿದ್ದರೆ ಮತ್ತು ನಿನಗೆ ಗೊತ್ತಿತ್ತಾಲ್ಲ? ನಿದ್ರೆ ಇಲ್ಲಾ ಎಂದು ಮತ್ತೆ ಯಾಕೆ ಡ್ಯೂಟಿಗೆ ಬಂದೆ? ಸುಮ್ಮನೆ ರಜೆ ಹಾಕಿ ಮನೆಗೆ ಹೋಗಬಾರದಿತ್ತೆ? ಎಂದರು.
ಅದಕ್ಕೆ ಡ್ರೈವರ್ ಸಾರ್ ನನ್ನ ಈ ತಪ್ಪಿಗೆ ಮುಖ್ಯ ಕಾರಣನೇ ನನ್ನ ಹೆಂಡತಿ ಎಂದನು.
ಸಬ್ಇನ್ಸ್ಪೆಕ್ಟರ್ಗೆ ಇದು ಸ್ವಲ್ಪ ಇಂಟರೆಸ್ಟ್ ಆಗಿ ತೋರಿತು. ಅಲ್ಲಾ ಕಣಯ್ಯ, ನೀನು ಮಾಡಿದ ತಪ್ಪಿಗೆ ನಿನ್ನ ಹೆಂಡತಿಯನ್ನು ಯಾಕೆ ದೂರುತ್ತೀಯ? ನಿನಗೆ ತಲೆ ಸರಿ ಇದೀಯೆನಯ್ಯ? ಎಂದರು. ಇಲ್ಲಾ ಸಾರ್ ಆ ಬೇವಸರ್ಿಯಿಂದ ನನ್ನ ಜೀವನ ಹೀಗೆ ಆಗಿ ಹೋಯಿತು ಎಂದು ಸ್ವಲ್ಪ ಏರು ಧ್ವನಿಯಲ್ಲಿ ಹೇಳಿದನು. ಸರಿಯಾಗಿ ಬಿಡಿಸಿ ಅದೇನು ಅಂಥಾ ಹೇಳಯ್ಯ? ಅಂದರು. ಡ್ರೈವರ್ ನಿಧಾನವಾಗಿ ತನ್ನ ಜೀವನದ ಕಥೆಯನ್ನು ಹೇಳುತ್ತಾ ಹೋದನು. ಸಾರ್ ನನ್ನ ಸ್ವಂತ ಊರು ತಿಪಟೂರಿನ ಹತ್ತಿರ ಸಣ್ಣಹಳ್ಳಿ. ನಮ್ಮದು ಬಡಕುಟುಂಬ. ನಾವು ಮೂರು ಗಂಡು, ಎರಡು ಹೆಣ್ಣು ಮಕ್ಕಳು ಒಟ್ಟು ಐದು ಜನ ಮಕ್ಕಳು. ನನ್ನ ತಂದೆ-ತಾಯಿ ಇದ್ದ ಅಲ್ಪಸ್ವಲ್ಪ ಜಮೀನಿನಲ್ಲೇ ನಮ್ಮನೆಲ್ಲಾ ಓದಿಸಿ ಬೆಳೆಸಿದರು. ನಾನೇ ಎರಡನೇ ಮಗ ಸಾರ್. ಎಸ್.ಎಸ್.ಎಲ್.ಸಿ ಯವರೆಗೂ ತಿಪಟೂರಿನಲ್ಲಿ ಓದಿ, ಆ ಮೇಲೆ ಕಾಲೇಜಿಗೆ ಸೇರಿಕೊಂಡೆ. ಸ್ನೇಹಿತರ ಸಲಹೆಯಂತೆ ಡ್ರೈವಿಂಗ್ ಕಲಿತು, ಲೈಸೆನ್ಸ್ ಸಹ ಮಾಡಿಸಿಕೊಂಡಿದ್ದೆ. ಕಾಲಕ್ರಮೇಣ ಕೆ.ಎಸ್.ಆರ್.ಟಿ.ಸಿ ಯಲ್ಲಿ ಡ್ರೈವರ್ ಹುದ್ದೆಗೆ ಕಾಲ್ ಮಾಡಿದ್ದರು. ನಾನು ಸಹ ಅಜರ್ಿ ಹಾಕಿದ್ದೆ. ಹೇಗೋ ಯಾವ ತೊಂದರೆ ಇಲ್ಲದೆ ನನಗೆ ಕೆ.ಎಸ್.ಆರ್.ಟಿ.ಸಿ ಯಲ್ಲಿ ಡ್ರೈವರ್ ಆಗಿ ಕೆಲಸಕ್ಕೆ ತೆಗೆದುಕೊಂಡರು. ಕೆ.ಎಸ್.ಆರ್.ಟಿ.ಸಿಯಲ್ಲಿ ಟ್ರೈನಿಂಗ್ ಅದು ಇದು ಎಂದು ಎರಡು ವರ್ಷ ಕಳೆದ ಮೇಲೆ ಖಾಯಂ ಮಾಡಿಕೊಂಡರು.
ಮದುವೆಗೆ ಮುಂಚೆ ನಾನು ನನ್ನ ಕುಟುಂಬದ ಜೊತೆ ಚೆನ್ನಾಗಿಯೇ ಇದ್ದೆ. ನಾನು ಕೆಲಸಕ್ಕೆ ಸೇರಿಕೊಂಡ ಮೇಲೆ ನನ್ನ ಇಬ್ಬರು ತಂಗಿಯರನ್ನು ಓದಿಸಿ ಮದುವೆಯನ್ನು ಸಹ ಮಾಡಿದೆ. ಐದಾರು ವರ್ಷಗಳಾದ ಮೇಲೆ ನನ್ನನ್ನು ಬೆಂಗಳೂರಿಗೆ ವಗರ್ಾವಣೆ ಮಾಡಿದರು.
ಇಲ್ಲಿಗೆ ಬಂದ ಮೇಲೆ ಬೆಂಗಳೂರಿನ ಟ್ರಾಫಿಕ್ಗೆ ಹೊಂದಿಕೊಂಡು ಬಹಳ ಜಾಗರೂಕತೆಯಿಂದ ಕೆಲಸ ಮಾಡುತ್ತಿದ್ದೆ. ನನಗೆ ದೂರದ ಪ್ರಯಾಣಕ್ಕೆ (ಲಾಂಗ್ ರೂಟ್) ಹಾಕುತ್ತಿದ್ದರು. ನಾನು ಅಷ್ಟೇ ಬಹಳ ನಿಯತ್ತಿನಿಂದ ಕೆಲಸ ಮಾಡಿಕೊಂಡು ಆರಾಮಾಗೆ ಇದ್ದೆ. ನಂತರ ಎಲ್ಲರಂತೆ ನನಗೂ ಮದುವೆಯಾಯಿತು ನೋಡಿ ಸಾರ್, ನನಗೆ ಅಲ್ಲಿಂದ ಶುರುವಾಯಿತು ಜೀವನದಲ್ಲಿ ಗೋಳು. ತಂದೆ-ತಾಯಿ, ಬಂಧುಗಳೇ ನೋಡಿ ಮಾಡಿದ ಮದುವೆ ಇದು. ಹುಡುಗಿ ಬಡವರ ಮನೆಯವಳು ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗುತ್ತಾಳೆ ಎಂದು ಹೇಳಿ ಮದುವೆ ಮಾಡಿದರು. ಹೆಸರು ಶಾಂತಮ್ಮ ಅಂಥ ಸಾರ್. ಆದರೆ ಅವಳು ಮಾತ್ರ ಎಂದೂ ಶಾಂತವಾಗಿರುತ್ತಿರಲಿಲ್ಲ. ಮದುವೆಯ ಹೊಸದರಲ್ಲಿ ಹಾಗೆ ಹೀಗೇ ಸ್ವಲ್ಪ ದಿನ ಸುಮ್ಮನಿದ್ದಳು. ಯಾವಾಗ ಬೆಂಗಳೂರಿಗೆ ಬಂದಳೋ ? ಅಂದಿನಿಂದ ಕ್ಯಾತೆ ತೆಗೆಯಲು ಶುರುಮಾಡಿದಳು. ಒಂದಲ್ಲಾ, ಎರಡಲ್ಲಾ ಬೆಂಗಳೂರಿಗೆ ಬಂದು ಹೊಸ ಸಂಸಾರ ಶುರು ಮಾಡಿದ ಮೇಲೆ ಒಂದು ದಿನವೂ ನಾನು ನೆಮ್ಮದಿಯಿಂದ ಇದ್ದ ದಿನವೇ ಇಲ್ಲಾ ಸಾರ್. ಎಷ್ಟು ದುಡಿದು ತಂದು ಹಾಕಿದರೂ ಸಮಾಧಾನ ಇಲ್ಲಾ ಆ ಲೋಫರ್ಗೆ ಸಾರ್ ಎಂದನು. ಇವಳಿಂದಾಗಿ ನನ್ನ ತಂದೆ-ತಾಯಿ, ಅಣ್ಣ-ತಮ್ಮ, ತಂಗಿ ಎಲ್ಲರೂ ದೂರವಾದರು. ನಾನು ಚೆನ್ನಾಗಿರಲೆಂದು ಪಾಪ! ಅವರ್ಯಾರು ಈ ಕಡೆ ಬರುವುದಿಲ್ಲ ಸಾರ್. ನಾನು ಎಷ್ಟೋ ಸಲ ಬುದ್ಧಿವಾದ ಹೇಳಿದ್ದೇನೆ. ವಿಧವಿಧವಾಗಿ ಹೇಳಿದೆನು. ಕೊನೆಗೆ ಬೈದು ಹೊಡೆದರೂ, ಅವಳು ಮಾತ್ರ ತನ್ನ ಹೀನ ಬುದ್ಧಿ ಬಿಟ್ಟು ಬಾಳಲಿಲ್ಲ ಸಾರ್. ಎರಡು ಮುದ್ದಾದ ಗಂಡು ಮಕ್ಕಳಿದ್ದಾರೆ. ಒಬ್ಬನು ನಾಲ್ಕನೇ ತರಗತಿ. ಇನ್ನೊಬ್ಬ ಎರಡನೇ ತರಗತಿ. ಓದಿನಲ್ಲಿ ಮುಂದು ಆದರೆ ಇವಳು ಮಾತ್ರ ಹೀಗೆ. ನಾನು ಎಷ್ಟೋ ಸಲ ಎಲ್ಲಾದರೂ ಹೋಗಿ ಬಿಡಬೇಕು ಅಂದುಕೊಂಡಿದ್ದೆ. ಆದರೆ ಏನು ಮಾಡಲಿ? ಮಕ್ಕಳ ಮುಖ ನೋಡಿಕೊಂಡು, ಸಮಾಜಕ್ಕೆ ಹೆದರಿ ಅವಳಿಗೆ ನಾನೇ ಹೊಂದಿಕೊಂಡು ಸಂಸಾರ ಮಾಡಿಕೊಂಡು ಹೋಗುತ್ತಿದ್ದೇನೆ ಸಾರ್ ಎಂದು ಹೆಂಡತಿಯನ್ನು ಬಾಯಿಗೆ ಬಂದಂತೆ ಬಯ್ಯಲು ಶುರುಮಾಡಿದನು.
ಅಲ್ಲಾ ಕಣಯ್ಯ ಅವಳು ಅಂಥಾ ತೊಂದರೆ ಏನು ಕೊಡುತ್ತಾಳೆ? ನಿನಗೆ ಎಂದರು ಸಬ್ಇನ್ಸ್ಪೆಕ್ಟರ್.
ನಿಮಗೆ ಗೊತ್ತಿಲ್ಲ ಸಾರ್. ಅವಳು ಹೆಣ್ಣಿನ ಕುಲಕ್ಕೆ ಅವಮಾನ ಏನೋ ಬಡವರ ಮನೆ ಹುಡುಗಿ ಎಂದು ಮದುವೆ ಮಾಡಿಕೊಂಡರೆ ಅವಳಿಗೆ ಇರುವ ದುಬರ್ುದ್ಧಿ ಯಾರಿಗೂ ಇಲ್ಲಾ. ತುಂಬಾ ದುರಾಸೆ, ಅತಿ ಆಸೆ ಸಾರ್. ನನಗೆ ಬರುವ ಸಂಬಳ ಅವಳಿಗೆ ಯಾವುದಕ್ಕೂ ಸಾಕಾಗುವುದಿಲ್ಲ. ಕಣ್ಣಿಗೆ ಕಾಣುವ ಯಾವ ಸೀರೆಯನ್ನು ಬಿಡುವುದಿಲ್ಲ. ಚಿನ್ನ ಕಂಡರೆ ಬಾಯಿ ಬಾಯಿ ಬಿಡುತ್ತಾಳೆ. ಎಷ್ಟು ತಂದುಕೊಟ್ಟರು ಸಮಾಧಾನ ಇಲ್ಲ. ಐಶ್ಯಾರಾಮಿ ಜೀವನ ನಡೆಸಬೇಕೆಂಬ ಆಸೆ ಅವಳಿಗೆ ಆದರೆ, ನನಗೆ ಆ ತರಹದ ಆಸೆ ಇಲ್ಲಾ ಸಾರ್. ಇದ್ದದ್ದರಲ್ಲೇ ಕಾಲು ಚಾಚಬೇಕು ಎಂಬುವನು ನಾನು. ಮನೆಗೆ ಅದು ಬೇಕು ಇದು ಬೇಕು ಎಂದು ಸದಾ ನನ್ನನ್ನು ಪೀಡಿಸುತ್ತಾಳೆ. ಎಷ್ಟು ಒಳ್ಳೆಯ ಮಾತಿನಿಂದ ಹೇಳಿದರೂ ಕೇಳುವುದಿಲ್ಲ.
ಹೀಗ್ಗೆ ಒಂದು ತಿಂಗಳಿಂದೆ ಒಂದು ಹೊಸರಾಗ ತೆಗೆದು ದಿನಾ ರಾತ್ರಿ ನನ್ನೊಡನೆ ಜಗಳ ಮಾಡುತ್ತಿದ್ದಳು. ಬೆಂಗಳೂರಿನಲ್ಲಿ ಎಲ್ಲಾದರೂ ಒಂದು ಸೈಟ್ ತೆಗೆದುಕೊಳ್ಳೋಣ ಅಂತಾಳೆ, ಆದರೆ ಅಷ್ಟೋಂದು ದುಡ್ಡು ನನ್ನ ಹತ್ತಿರ ಇಲ್ಲ ಎಂದು ಹೇಳಿದರೂ ಕೇಳುತ್ತಿಲ್ಲಾ ಸಾರ್. ಮನೆಗೆ ಹೋದರೆ ಸಾಕು ದಿನಾ ಜಗಳ ಗಲಾಟೆ, ಏನು ಮಾಡಲಿ ಇವಳ ಈ ಕಾಟ ತಡೆಯಲಾರದೆ ಡ್ಯೂಟಿ ಮುಗಿದ ಮೇಲೆ ಡ್ರಿಂಗ್ಸ್ ಮಾಡಿಕೊಂಡು ಹೋಗಿ ಮಲಗಿಬಿಡುತ್ತಿದ್ದೆ. ಬೆಳಗ್ಗೆ ಎದ್ದರೆ ಸಾಕು ಇದೇ ರಾಮಾಯಣ.
ಈಗ ಅವಳ ಕಣ್ಣು ಊರಿನಲ್ಲಿರೋ ಜಮೀನಿನ ಮೇಲೆ ಬಿದ್ದಿದೆ. ಆ ಜಮೀನನ್ನೇ ನಂಬಿಕೊಂಡು ತಂದೆ-ತಾಯಿ, ಅಣ್ಣ-ತಮ್ಮ ಜೀವನ ನಡೆಸುತ್ತಿದ್ದಾರೆ. ನಾನು ಹೋಗಿ ಅದನ್ನು ಕೇಳಲು ನನಗೆ ಮನಸ್ಸಿಲ್ಲ. ಎಷ್ಟು ವಿಧವಾಗಿ ಹೇಳಿದರೂ ಕೇಳುತ್ತಿಲ್ಲ? ದಿನಾ ಇದೇ ಜಗಳ ಮಕ್ಕಳು ಸಹ ಇವಳ ವರ್ತನೆಯಿಂದ ರೋಸಿ ಹೋಗಿದ್ದಾವೆ. ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಾಳೆ. ಗಂಡಸಾಗಿ ನಾನೇ ಎಷ್ಟೋ ಸಲ ಅವಳ ಬೈಗುಳದ ಮಾತುಗಳನ್ನು ಸಹಿಸಿಕೊಂಡು ಸಾಕಾಗಿ ಹೋಗಿದೆ. ನಿನ್ನೆ ದಿನವು ಇದೇ ಗಲಾಟೆ ಜಗಳ ನಡೆದು ಇಡೀ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ ಸಾರ್. ಸಾಯುತ್ತೇನೆ ಹಾಗೇ ಹೀಗೆ ಅಂತಾ ಹೆದರಿಸುತ್ತಾ, ರಾತ್ರಿ ಮೂರು ಗಂಟೆಯವರೆಗೂ ಪಂಚಾಯಿತಿ ಮಾಡಿ, ಮನೆಯಲ್ಲಿ ದೊಡ್ಡ ರಾದ್ಧಾಂತ ಮಾಡಿದಳು. ನಾನು ಈ ದಿನ ಕೆಲಸಕ್ಕೆ ಬರದಿದ್ದರೂ ಆಗುತ್ತಿತ್ತು ಸಾರ್. ಆದರೆ, ನಾನು ಪಾಪಿ ನನ್ಮಗ ಬಂದು ಎಂಟು ಜನರ ಜೀವ ತೆಗೆದುಬಿಟ್ಟೆ ಸಾರ್ ಎಂದು ಹಣೆ ಹಣೆ ಚಚ್ಚಿಕೊಂಡು ಗೋಳಿಟ್ಟನು.
ಡ್ರೈವರ್ ಹೇಳಿದ ಕಥೆ ಕೇಳಿ ಸಬ್ಇನ್ಸ್ಪೆಕ್ಟರ್ಗೆ ಒಂದು ಕ್ಷಣ ಏನು ಮಾತನಾಡಲು ಆಗಲಿಲ್ಲ. ಸುಮ್ಮನೆ ಆ ಡ್ರೈವರ್ನನ್ನು ನೋಡುತ್ತಾ ನಿಂತು ಬಿಟ್ಟರು. ಐದು ನಿಮಿಷದ ಮೇಲೆ ಡ್ರೈವರ್ ಸ್ವಲ್ಪ ಸಮಾಧಾನವಾದನು. ಸಬ್ಇನ್ಸ್ಪೆಕ್ಟರ್ ಪೋಲೀಸ್ ಕಾನ್ಸ್ಟೇಬಲ್ನನ್ನು ಕರೆದುಕೊಂಡು ಹೋಗಿ ಸೆಲ್ ಒಳಗೆ ಹಾಕಲು ಹೇಳಿದರು.
ದಫೇದಾರ್ ಡ್ರೈವರ್ ಮೇಲೆ ಎಫ್.ಐ.ಆರ್ ಕಂಪ್ಲೆಂಟನ್ನು ಬರೆದು ತಂದು ಸಾಹೇಬರ ಮುಂದೆ ಇಟ್ಟು ಹೋದನು. ಸಬ್ಇನ್ಸ್ಪೆಕ್ಟರ್ ಕಂಪ್ಲೆಂಟ್ ಮೇಲೆ ಸಹಿ ಮಾಡಿ ಕೋಟರ್್ಗೆ ಕಳಿಸಲು ತಯಾರಾದರು. ಸಹಿ ಮಾಡುವ ಮುನ್ನಾ ಒಮ್ಮೆ ಆ ಡ್ರೈವರ್ ಹೇಳಿದ ಕಥೆಯನ್ನು ತಮ್ಮಲ್ಲೇ ಅವಲೋಕಿಸದರು. ಅದು ಒಬ್ಬ ಮಮೂಲಿ ಮನುಷ್ಯರಾಗಿ ಈ ಕೇಸ್ನಲ್ಲಿ ನಿಜವಾಗಿ ಡ್ರೈವರ್ ಒಬ್ಬ ಅಪರಾಧಿ. ಅವನಿಗೆ ಕೋಟರ್್ ಶಿಕ್ಷೆ ವಿಧಿಸುವುದು ನಿಜ. ಆದರೆ, ನಿಜವಾದ ಅಪರಾಧಿ ಯಾರು ? ಸತ್ಯವಾಗಿ ದೇವರ ತೀಪರ್ಿನಂತೆ ನಿಜವಾದ ಅಪರಾಧಿ ಅವನ ಹೆಂಡತಿ. ಅವನ ಈ ಘೋರಕೃತ್ಯಕ್ಕೆ ಪರೋಕ್ಷವಾಗಿ ಅವಳೇ ಕಾರಣ. ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಅವಳು ಪ್ರತಿಯೊಂದು ಹಂತದಲ್ಲೂ ಹೊರಗಡೆ ಹೋಗಿ ದುಡಿಯುವ ಗಂಡಸಿಗೆ ಅವಳೇ ಆದರ್ಶದ ಮೂಲವಾಗಿರಬೇಕು.
ಗಂಡನ ದುಡಿಮೆಗೆ ತಕ್ಕ ಹಾಗೆ ಸಂಸಾರದ ತಕ್ಕಡಿಯನ್ನು ತೂಗಿಸಬೇಕು. ಕೆಲಸಕ್ಕೆ ಹೋಗುವ ಗಂಡಸಿಗೆ ಮನೆಯಲ್ಲೇ ಆದಷ್ಟು ಸುಖ, ಶಾಂತಿ, ನೆಮ್ಮದಿಯನ್ನು ನೀಡಬೇಕು. ಯಾಕೆಂದರೆ ಹೊರಗಡೆ ದುಡಿಯಲು ಹೋದ ಗಂಡಸಿಗೆ ಅನೇಕ ಕಷ್ಟ ತೊಂದರೆಗಳು ಇರುತ್ತದೆ. ಅವನು ಅವನ್ನೆಲ್ಲಾ ನಿಭಾಯಿಸಿ ಸಂಸಾರಕ್ಕೆ ದುಡಿದು ತಂದು ಹಾಕುತ್ತಾನೆ. ಇದನ್ನೆಲ್ಲಾ ಅರಿತು ಹೆಂಡತಿಯಾದವಳು, ಗಂಡನೊಡನೆ ಅನಾವಶ್ಯಕವಾಗಿ ಜಗಳ ಮಾಡದೆ, ಅವನು ಮನೆಗೆ ಬಂದಾಗ ಮತ್ತು ಹೊರಗೆ ಹೋಗುವಾಗ ನಗುತ್ತಾ, ನೆಮ್ಮದಿಯಿಂದ ಅವನ ಯೋಗಕ್ಷೇಮ ನೋಡಿಕೊಂಡು ಸಂಸಾರವನ್ನು ಮಾಡಬೇಕು. ಆಗಲೇ ಅದು ಒಳ್ಳೆಯ ಗಂಡ-ಹೆಂಡತಿ ಸಂಬಂಧವಾಗುವುದು. ಸುಖ-ಸಂಸಾರವಾಗುವುದು. ಹಿರಿಯರ ಅನುಭವದ ಮಾತಿನಂತೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಮತ್ತು ಬೇರೆಯವರನ್ನು ನೋಡಿ ನಾವು ಅವರ ರೀತಿ ಬದುಕಬೇಕು, ಹಾಗೆ ಇರಬೇಕು, ಹೀಗೆ ಬಾಳಬೇಕು ಎಂಬ ಕೆಟ್ಟ ಧೋರಣೆಯ ಅನುಕರಣೆ ಮಾತ್ರ ಮಾಡಬಾರದು ಅತಿಯಾದ ಆಸೆ ಯಾವತ್ತಿದ್ದರೂ ದುಃಖಕ್ಕೆ ಮೂಲ.
ಡ್ರೈವರ್ನ ಹೆಂಡತಿಯ ಆ ವರ್ತನೆಯಿಂದ ಅನ್ಯಾಯವಾಗಿ ಎಂಟು ಜನರು ಅಮಾಯಕರು ಸಾವನ್ನಪ್ಪಿದರು. ಅವರನ್ನೇ ನಂಬಿದ್ದ ಅವರ ಸಂಬಂಧಿಗಳ ಗತಿಯೇನು? ಅಲ್ಲದೆ ಡ್ರೈವರ್ ಜೈಲಿಗೆ ಹೋದ ಮೇಲೆ ಇವಳ ಸಂಸಾರದ ಗತಿಯೇನಾಗಬೇಡ? ತನ್ನ ಇಬ್ಬರ ಮಕ್ಕಳ ಭವಿಷ್ಯವನ್ನು ರೂಪಿಸಲು ಹೊರಟಿದ್ದ ಡ್ರೈವರ್ಗೆ ಜೀವಾವಧಿ ಶಿಕ್ಷೆಯಾದರೆ, ಮುಂದೆ ಆ ಮಕ್ಕಳ ಪಾಡೇನು? ಇದಕ್ಕೆಲ್ಲಾ ಮೂಲ ಕಾರಣ ಡ್ರೈವರ್ನ ಹೆಂಡತಿಯಲ್ಲವೇ ? ನಿಜವಾಗಿ ಅವಳೇ ಕೊಲೆಗಡುಕಿ. ಅವಳಿಗೆ ಶಿಕ್ಷೆಯಾಗಬೇಕು. ಇದು ಮಾತ್ರ ಸಾಧ್ಯವಿಲ್ಲದ ಮಾತು. ಯಾಕೆಂದರೆ ಇದು ವಾಸ್ತವವಲ್ಲ. ನೈಜ್ಯತೆಗೂ, ಕಲ್ಪನೆಗೂ ಬಹಳ ವ್ಯತ್ಯಾಸವಿದೆ. ಕೊಲೆ ಮಾಡುವವನಿಗಿಂತ ಕೊಲೆ ಮಾಡಿಸುವವರೇ ಹೆಚ್ಚಾಗಿದ್ದಾರೆ ನಮ್ಮ ಸಮಾಜದಲ್ಲಿ.
ಸಾಧು, ನಿರ್ಮಲ, ಮುಗ್ಧ ಸ್ವಭಾವದ ಮನಸ್ಸುಳ್ಳವರನ್ನು ಕೆಲವು ಕ್ರೌರ್ಯ, ಕ್ರೂರತನದಂಥವರು, ಪೈಚಾಚಿಕ ವ್ಯಕ್ತಿತ್ವವುಳ್ಳವರು ಈ ತರಹದ ಅನೇಕ ಕೃತ್ಯಗಳನ್ನು ಮಾಡಿಸುತ್ತಾ ಬಂದಿದ್ದಾರೆ. ಆದರೆ, ಇವರ್ಯಾರು ಅಪರಾಧಿಗಳಾವುದಿಲ್ಲ? ಅಪರಾಧಿ ಸ್ಥಾನದಲ್ಲಿ ನಿಲ್ಲವರೇ ಮುಗ್ಧರು. ನಿಜವಾಗಿ ಈ ತರಹದ ಜನಗಳಿಗೆ ಶಿಕ್ಷೆಯಾಗುವುದು ಯಾವಾಗ ? ಎಂದು ಯೋಚಿಸುತ್ತಾ, ಸಹಿ ಹಾಕಿದರು ಸಬ್ಇನ್ಸ್ಪೆಕ್ಟರ್.
No comments:
Post a Comment