ವೈವಿಧ್ಯಮಯ ಜೀವ ಜಗತ್ತಿಗೆ ಪ್ರಕೃತಿದತ್ತ ವರದಾನ ಸಂಗೀತ. ಜೀವಿ-ಜೀವಗಳ ಮನ-ಮನಸ್ಸುಗಳ ಭಾವನೆಗಳೊಡನೆ, ನೋವು-ನಲಿವುಗಳಿಗೆ ಸ್ಪಂದಿಸುವುದೇ ಸಂಗೀತದ ರಾಗಗಳು. ಮನುಷ್ಯನ ಭಾವನೆಗಳೊಡನೆ ಬೆರೆಯುವುದೇ ಸುಮಧರ ರಾಗ. ಭಗವಂತ ಮಾಡಿದ ಮಣ್ಣಿನ ಹಣತೆಗಳು ನಾವುಗಳು. ಅದರಲ್ಲಿ ಆಯುಷ್ಯ ಎಂಬ ಎಣ್ಣಿಯಲ್ಲಿ ನಮ್ಮ ಅರಿವು, ಜ್ಞಾನ, ಸನ್ನಡತೆ ಎಂಬ ಬತ್ತಿಯಿಂದ, ಎಲ್ಲರನೂ ತಮ್ಮಂತೆ ತಿಳಿದು, ಕೆಡಕನ್ನು ಬಯಸದೆ ಬದುಕಲ್ಲಿ ಬರುವ ಸಂಕಷ್ಟಗಳ ಬಿರುಗಾಳಿಗೆ ಆರದೆ ಬೆಳಗುವ ದೀಪಗಳಾಗಬೇಕು. ಬದುಕೆಂಬ ಹಾಡಿಗೆ ಭಾವವೆಂಬ ರಾಗ ಸೇರಿದಾಗ ಬಾಳು ಸಾರ್ಥಕ ಅದುವೇ ರಾಗ ದೀಪಿಕಾ.........
ಎಲ್ಲಾ ಓದುಗರಿಗೆ ನನ್ನ ಹೃದಯ ಪೂರ್ವಕ ಸ್ವಾಗತ ಸುಸ್ವಾಗತ

Friday, 30 May 2014

ಸಾಕ್ಷಿ

      ಸಂಜೆಯ ಗೋಧೂಳಿ ಸಮಯ ಮೇಯಲು ಹೋಗಿದ್ದ ದನಗಳು ಕೊಟ್ಟಿಗೆಗೆ ಬರಬರನೇ ಬಂದು ಗೊಂತೆಗೆ ಹಾಕಿದ್ದ ಹುಲ್ಲನ್ನು ಮುಗಿಬಿದ್ದು ತಿನ್ನತೊಡಗಿದವು. ಬೆಟ್ಟೇಗೌಡ ದನಗಳ ಮೂಗುದಾರವನ್ನು ಹಿಡಿದು ಅವುಗಳ ಜಾಗಕ್ಕೆ ಕಟ್ಟಿ ಹಾಕಲು ತಡವರಿಸುತ್ತಿದ್ದ.  ತುಂಡು ಗೋಡಯ ಮೇಲೆ ಇಟ್ಟಿದ್ದ ಸೀಮೆ ಎಣ್ಣೆ ಬುಟ್ಟಿಯ ಬೆಳಕು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ತಾಯಮ್ಮ ತಾನು ಮೇಯಿಸಲು ಹೊಡೆದುಕೊಂಡು ಹೋಗಿದ್ದ ಎರಡು ಕುರಿಗಳನ್ನು ತಂದು ಕೊಟ್ಟಿಗೆಯ ಪಕ್ಕದಲ್ಲಿದ್ದ ಬಚ್ಚಲಮನೆಯಲ್ಲಿ ಕಟ್ಟಿಹಾಕಿ, ಕೋಳಿಗಳನ್ನು ಕೌಚಾಕಲು ಪಡಸಾಲೆಗೆ ಬಂದಳು. ಅಷ್ಟೋತ್ತಿಗಾಗಲೇ ಅರ್ಧ ಕೋಳಿಗಳು ಬಂದು ನಿಂತಿದ್ದವು.  ಇನ್ನು ಕೆಲವು ರಾಗಿ ಮೂಟೆಗಳ ಮೇಲೆ ಹತ್ತಿ ನಿಂತಿದ್ದವು ಇನ್ನೂ ಕೆಲವು ಕೋಳಿಗಳು ನಾವೇನು ಭರತನಾಟ್ಯದವರಿಗಿಂದ ಕಮ್ಮಿ ಎಂದು ಕತ್ತನ್ನು ತಿರುಗಿಸುತ್ತಾ ಆ ಕಡೆ ಈ ಕಡೆ ನೋಡುತ್ತಿದ್ದವು.  ತಾಯಮ್ಮ ಸುಮಾರು ಹದಿನೈದರಿಂದ ಇಪ್ಪತ್ತು ಕೋಳಿಗಳನ್ನು ಸಾಕಿದ್ದಳು. ತನ್ನ ಅಪ್ಪನ ಮನೆಯಿಂದ ತಂದ ಒಂದೇ ಒಂದು ಹ್ಯಾಟೆಯಿಂದ ಇಷ್ಟೋಂದು ಕೋಳಿಗಳ ಸಂತತಿ ಬೆಳೆದು ನಿಂತಿತ್ತು.  ತಾಯಮ್ಮ ಬಂದವಳೇ ಕೈಗೆ ಸಿಕ್ಕ ಕೋಳಿಗಳನ್ನು ಹಿಡಿದು ಮಂಕರಿಯನ್ನು ಎತ್ತಿ ಕೌಚ್ ಹಾಕಿದಳು.  ಉಳಿದ ಕೋಳಿಗಳು ಅತ್ತಿತ್ತ ಓಡಾಡುತ್ತಾ ತಪ್ಪಿಸಿಕೊಳ್ಳಲು ಕೊಕ್ಕರಿಸುತ್ತಿದ್ದವು.

     ತಾಯಮ್ಮ ಎಣಿಸಿ ಎಣಿಸಿ ಕೌಚ್ ಹಾಕುತ್ತಿದ್ದ ಕೋಳಿಗಳಲ್ಲಿ ಒಂದು ಹುಂಜ ಮಾತ್ರ ಕಾಣಿಸಲಿಲ್ಲ.  ಮಂಕರಿ ಎತ್ತಿ ಮತ್ತೆ ಮತ್ತೆ ಕೋಳಿಗಳನ್ನು ಎಣಿಸ ತೊಡಗಿದಳು.  ಆದರೆ ಅವಳ ಲೆಕ್ಕದ ಪ್ರಕಾರ ಒಂದು ಹುಂಜ ಇರಲಿಲ್ಲ.  ಎದ್ದವಳೇ ಪಡಸಾಲೆ ಕೋಣೆಯನ್ನೆಲ್ಲಾ ಹಣತೆ ಹಿಡಿದುಕೊಂಡು ಸಂಧಿಗೊಂದಿಯನ್ನೆಲ್ಲಾ ಹುಡುಕತೊಡಗಿದಳು.  ಎಲ್ಲಾದರೂ ಅವಿತುಕೊಂಡಿರುತ್ತೆ ಅಂದುಕೊಂಡು, ಆದರೆ ಹುಂಜ ಎಲ್ಲೂ ಕಾಣಿಸಲಿಲ್ಲ.  ಮನೆಯ ಬಾಗಿಲ ಬಳಿ ಬಂದು ಜಗಲಿಯ ಆ ಕಡೆ ಈ ಕಡೆ ಎರಡೂ ಕಡೆ ನೋಡಿದರೂ ಹುಂಜ ಕಾಣುತ್ತಿಲ್ಲ  ಹಾಳದ್ದು ಎಲ್ಲಿ ಹೋಯಿತು ಎಂದು ತಲೆ ಕೆರೆದುಕೊಂಡು ಪೇಚಾಡ ತೊಡಗಿದಳು.  ಆಗಲೇ ಕತ್ತಲೆಯ ಮಬ್ಬು ಕವಿದು ಎಲ್ಲವೂ ಅಸ್ಪಷ್ಟವಾಗಿ ಕಾಣಿಸುತ್ತಿತ್ತು.  ತಾಯಮ್ಮ ಮನೆ ಸುತ್ತ ಒಂದು ಸುತ್ತು ಬಂದ್ಲು. ಆ ಮನೆ ಓಣಿ ಈ ಮನೆ ಓಣಿ ಕೋಳಿಗಳು ಕೆದಕಲು ಹೋಗಿದ್ದ ತಿಪ್ಪೆಗುಂಡಿ ಕಡೆ ಹುಡುಕಿದರೂ ಹುಂಜ ಮಾತ್ರ ಕಾಣಿಸಲಿಲ್ಲ. ತಾಯಮ್ಮನಿಗೆ ಏಕೋ ಏನೋ ಮನಸ್ಸಿನೊಳಗೆ ಹುಂಜ ಸಿಗುವುದು ಅರ್ಧ ಅನುಮಾನವೇ ಆಯಿತು. ಸರಸರನೆ ಮನೆಗೆ ಬಂದವಳೆ ಮತ್ತೆ ಮನೆಯನ್ನೆಲ್ಲಾ ಹುಡುಕಲಾರಂಭಿಸಿದಳು.  ಆದರೆ ಹುಂಜದ ಸುಳಿವೆ ಇಲ್ಲ.  ದನಗಳನ್ನು ಕಟ್ಟಿಹಾಕಿ ಹುಲ್ಲು ತರಲು ಬೆಟ್ಟೇಗೌಡ ಕೊಟ್ಟಿಗೆಯಿಂದ ಹೊರಬಂದ ತಾಯಮ್ಮ ಗಾಬರಿಯಿಂದ ಏನನ್ನೋ ಹುಡುಕುತ್ತಿದ್ದದ್ದು ಕಣ್ಣಿಗೆ ಬಿತ್ತು.
ಏನೇ ಹಂಗೆ ಹುಡುಕುತ್ತಿದ್ದೀಯಾ? ಎಂದನು.
ಹುಂಜ ಕಾಣುತ್ತಿಲ್ಲ ಕಣಿ ಎಂದಳು.
ಯಾವುದೇ? ......... ಅದೇ ಕೆಂದದ್ದು, ಭದ್ರಕಾಳಮ್ಮನ ಹರಕೆಗೆ ಅಂತಾ ಬಿಟ್ಟಿದ್ದಲ್ವಾ ಅದಾ?
 ಹ್ಞೂಂ ಕಣಿ ಅದೇಯಾ ಎನ್ನುತ್ತಾ ನಿಟ್ಟುಸಿರು ಬಿಟ್ಟಳು ತಾಯಮ್ಮ.
ಹೋಯಿತಾ................ಏನಿಲ್ಲ ಅಂದ್ರು ಎರಡರಿಂದ ಮೂರು ಕೆ.ಜಿ ತೂಗುತ್ತಿತ್ತಲ್ಲೇ ಅನ್ಯಾಯವಾಗಿ ಕಂಡವರ ಪಾಲು ಆಯಿತಾ? ಎಲ್ಲಾ ಕಡೆ ಸರಿಯಾಗಿ ಹುಡುಕಿದ್ದಿಯೇನೆ?  ಎಂದು ಹೆಂಡತಿಗೆ ಕೇಳಿದನು.
ಹ್ಞೂ ಕಣಿ ಅಷ್ಟೋತ್ತಿಂದ ಎಲ್ಲಾ ಕಡೆ ಬಿಡದೆ ಹುಡುಕಿದ್ದೀನಿ ಎಲ್ಲೂ ಕಾಣಿಸುತ್ತಿಲ್ಲಾ ಆ ತಾಯಿ ಹೆಸರು ಹೇಳಿ ಬಿಟ್ಟಿದ್ದೀನಿ ಎಲ್ಲ ಹೋಯಿತೋ ನಾ ಬೇರೆ ಕಾಣೆ, ಎಂದು ಮುಖ ಸಪ್ಪಗೆ ಮಾಡಿಕೊಂಡಳು. ಕೋಣೆಯಲ್ಲಿ ಹಿಟ್ಟಿನ ಮಡಿಕೆಯನ್ನು ಕೆರೆಯುತ್ತಿದ್ದ ತನ್ನ ಅವ್ವ ಪುಟ್ಟಮ್ಮನನ್ನು ಬೆಟ್ಟೇಗೌಡ ಪಡಸಾಲೆಯಿಂದ ಕೇಳಿದ,
ಅವ್ವಾ ಹುಂಜನ ನೋಡಿದ್ಯಾ?
ಇಲ್ಲಾ ಕಣ್ಲಾ ನಂಜಾ ಇವತ್ತು ಮನೆ ಕಡೆಗೆ ಬಂದಿಲ್ಲಾ ಎಂದಳು ಪುಟ್ಟಮ್ಮ.
ಪುಟ್ಟಮ್ಮನಿಗೆ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ  ವಯಸ್ಸಾಗಿತ್ತು.  ಅವಳ ಈ ಮಾತಿಗೆ ಬೆಟ್ಟೇಗೌಡನಿಗೆ ನಗು ತಡಯಲಾಗಲಿಲ್ಲ. ಆದರೂ ನಗುವನ್ನು ಮನಸ್ಸಿನಲ್ಲೇ ಅದುಮಿಕೊಂಡು ಅವ್ವನ ಕಿವಿಯ ಹತ್ತಿರ ಹೋಗಿ ಜೋರಾಗಿ ಅವ್ವಾ ನಮ್ಮ ಹುಂಜ ಮನೆಗೆ ಬಂದಿಲ್ಲಾ ನೀನು ನೋಡಿದ್ಯಾ? ಎಂದನು.
ಇಲ್ಲಾ ಕಣ್ಲಾ ಮಗಾ ಸಾಯಂಕಾಲ ಜಗಲಿ ಮೇಲೆ ಹುಣಸೇ ಬೀಜ ತೇಗಿತಾ ಕುಂತಿದ್ದೆ ನಮ್ಮನೇವು, ಸಾವಿತ್ರಿ ಮನೇವು ಒಟ್ಟಿಗೆ ಕಸ ಕೆರೆಯುತ್ತಿದ್ವು ಅಟೇಯಾ ಆಮ್ಯಾಕೆ ನಾನು ಒಳಕ್ಕೆ ಬಂದೇ ಕಣ್ಲಾ ಮಗಾ ಎಂದು ಒಂದೇ ಉಸಿರಿಗೆ ಕಣ್ಣು ಬಾಯಿ ಅಗಲಿಸಿಕೊಂಡು ಹೇಳಿದಳು.   ಈಟೊತ್ತಾದರೂ ಬಂದಿಲ್ಲ ಅಂದ್ರೇ? ಎಲ್ಲಿಗೆ ಹೋಯ್ತು? ಎನ್ನುತ್ತಾ ಬೆಟ್ಟೇಗೌಡ ಹಿತ್ತಲು ಕಡೆಗೆ ಹುಲ್ಲು ತರಲು ಹೊರಟ.

                                    - 2 -
ಪುಟ್ಟಮ್ಮ ಮನೆಯ ಹೊರಗಡೆ ಬಂದು ಒಂದು ಸಲ ಸುತ್ತಲೂ ನೋಡಿ, ತನ್ನ ಸೀರೆ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡಳು ಬಾಯಲ್ಲಿದ್ದ ಎಲೆ -ಅಡಿಕೆಯನ್ನು ಉಗಿದು ಎದುರು ಮನೆಯ ಹಟ್ಟಿ ಕಡೆಗೆ ತಿರುಗಿನಿಂತು ಜೋರಾಗಿ ಎಷ್ಟು ದಿನದಿಂದ ಕಾಯ್ಕೊಂಡು ಕುಂತಿದ್ರೇ? ಯಾವ ನನ್ನ ಸವತಿನೇ ನಮ್ಮನೆ ಹುಂಜನ ಕೌಚ ಹಾಕೊಂಡಿರೋಳು?  ಒಳ್ಳೆ ಮಾತಿನಿಂದ ಬಿಟ್ಟರೇ ಸರಿ, ಇಲ್ಲಾ ಅಂದ್ರೆ ಬೆಳ್ಗೆ ಹೊತ್ತಿಗೆ ವಾಂತಿ ಭೇದಿ ಬಂದು ಸಾಯಬೇಕು ಹಂಗೆ ಮಾಡಿಬಿಡ್ತೀನಿ  ಅಂತಾ ಜೋರಾಗಿ ಬಾಯಿಗೆ ಬಂದಂತೆ ಬೈಯತೊಡಗಿದಳು.  ಪುಟ್ಟಮ್ಮನ ದೇಹಕ್ಕೆ ವಯಸ್ಸಾಗಿದ್ದರೂ ಅವಳ ಬಾಯಿ ಮಾತ್ರ ಜೋರಾಗಿತ್ತು. ಅವಳ ಮಾತಿನ ಅಬ್ಬರಕ್ಕೆ ಎಂಥವರು ಸಹ ಬಾಯಿ ಬಿಡ್ತಾ ಇರಲಿಲ್ಲ.  ಅಷ್ಟು ಜೋರಾಗಿ ಅಬ್ಬರಿಸುತ್ತಿದ್ದಳು ಮುದುಕಿ. ಅಕ್ಕಪಕ್ಕದ ಮನೆಯವರೆಲ್ಲಾ ಹೊರಗೆ ಬಂದು ಈ ಮುದುಕಿಯ ಬೈಗುಳದ ಮಾತನ್ನು ಸಂಜೆಯ ರೇಡಿಯೋ ತರಹ ಕೇಳ ತೊಡಗಿದರು.  ಬೆಟ್ಟೇಗೌಡನ ಎದುರು ಹಟ್ಟಿಯ ಮಂಜೇಗೌಡನ ಮಕ್ಕಳು ಸಹ ಗುಸುಗುಡುತ್ತಾ ನೋಡುತ್ತಾ ನಿಂತವು.  ಅತ್ಲಾ ಕಡೆಯಿಂದ ಹುಲ್ಲು ಹೊರೆಯನ್ನು ಹೊತ್ಕೊಂಡು ಬಂದು ಮಂಜೇಗೌಡ ಜಗಲಿ ಮೇಲೆ ನಿಂತಿದ್ದ ತನ್ನ ಮಕ್ಕಳನ್ನು ನೋಡಿ ಗದರಿಸಿದ.
ಯಾವನ್ಲೆ ಅವನು ಮಾಡಕ್ಕೆ ಒಳಗೆ ಭದ್ರಗೆ ಕ್ಯಾಮೆ ಇಲ್ವೇನ್ರೋ ? ಆ ದೆವ್ವ ಹಿಡಿದವಳ ಮಾತನ್ನು ಏನು  ಕೇಳಿಸ್ಕೊಂಡು ನಿಂತಿದ್ದೀರಾ ನೆಡಿರೋ ಒಳಕ್ಕೆ ಎನ್ನುತ್ತಾ ಕೊಟ್ಟಿಗೆಗೆ ಹೋದ.

    ಮಂಜೇಗೌಡನ ನೋಡಿದ್ದೆ ತಡ ಪುಟ್ಟಮ್ಮನ ಬೈಗುಳದ ವರಸೆನೇ ಬದ್ಲಾಯ್ತು.  ಮಂಜೇಗೌಡನನ್ನು ಗುರಿಯಾಗಿಟ್ಟು ಇನ್ನೂ ಜೋರಾಗಿ ಜಾಡಿಸತೊಡಗಿದಳು.

ನನ್ನ ಸವತಿ ಮಗನ ಮನೆ ಹಾಳಾಗ, ಅವನ ವಂಶ ನಿರ್ವಂಶ ಹಾಗ ಎನ್ನುತ್ತಾ ನೆಟಿಕೆ  ಮುರಿದಳು.  ತಾಯಮ್ಮನಿಗೆ ಇನ್ನೂ ತಡೆಯಲಾಗಲಿಲ್ಲ.
ಹೋದ್ರೆ ಹೋಗ್ಲಿ ಬಿಡತ್ತೆ, ನೀನು ಒಳ್ಗೆ ಬಾ ಎಂದ್ಲು.
ಓಹೋ.......ನೀನೊಬ್ಬಳು ಇದ್ದೆ ನನ್ಗೆ ಹೇಳಕೆ ಒಳ್ಗೆ ಹೋಗೆ ನನ್ನ ಹೊಟ್ಟೆ ಉರಿಯುತ್ತಿದೆ. ಬಂದ್ಬಿಟ್ಲು ಇವಳೊಬ್ಳು ಎಂದು ತನಗೆ ಗೊತ್ತಿರುವ ಎಲ್ಲಾ ಬೈಗುಳದ ಶಬ್ದಗಳನ್ನು ಉಚ್ಚರಿಸುತ್ತಾ ನಿಂತಳು.  ಮಂಜೇಗೌಡ ಕೊಟ್ಟಿಗೆಯಿಂದ ಬಂದವನೇ ಒಂದ್ಸಲ ಪುಟ್ಟಮ್ಮನನ್ನು ನೋಡಿ ಮುಖ ಸಿಂಡರಿಸ್ಕೊಂಡು ಮನೆ ಒಳ್ಗೆ ಹೋಗಿ ಕದವನ್ನು ದಢಾರನೇ ಹಾಕಿಕೊಂಡನು ಸ್ವಲ್ಪ ಹೊತ್ಗೆ ಬೆಟ್ಟೇಗೌಡ ಹುಲ್ಲೊರೆ ಹೊತ್ಕೊಂಡು ಬಂದನು.  ಬಂದವನೇ ಅವ್ವನ ಆವೇಶ ನೋಡಿ ಸಮಾಧಾನ ಮಾಡುತ್ತಾ ಕೈ ಹಿಡಿದುಕೊಂಡು ಒಳ್ಗೆ ಕರ್ಕೊಂಡು ಹೋದನು.

     ರಾತ್ರಿ ಉಣ್ಣುವರೆಗೂ ಪುಟ್ಟಮ್ಮನ ಬಾಯಿ ಮಾತ್ರ ವಟಗುಡುತ್ತಲೇ ಇತ್ತು. ಕೊನೆಗೆ ಬೆಟ್ಟೇಗೌಡ       ಹೋಗ್ಲಿ  ಬಿಡವ್ವಾ, ಎಷ್ಟು ಬೈಯುತ್ತಿಯಾ? ಬೆಳಕು ಹರಿಲಿ ನೋಡೋಣ ಎಂದ.
ಏನ್ಲಾ ಸುಮ್ನಾಗೋದು, ಹೋದ ತಿಂಗ್ಳು ಎರಡು ಕೋಳಿ ಹೋದ್ವು ಈಗ ಒಳ್ಳೆ ಸಖತ್ತಾಗಿದ್ದ ಹುಂಜನೇ ಮುರುಕೊಂಡವ್ನೆ ಆ ನನ್ನ ಸವತಿ ಮಗ ಎಂದ್ಲು ಪುಟ್ಟಮ್ಮ ರೋಷದಲ್ಲಿ.
ನಂಗೂ ಅವನ್ಮೇಲೆ ಗುಮಾನಿ ಕಣಾವ್ವ
ಗುಮಾನಿ ಎಂತದ್ಲಾ ಅವನೇ ನನ್ನ ಸವತಿ ಮಗನ್ದೆ ಕೆಲ್ಸಾ ಇದು ಎಂದ್ಲು ಪುಟ್ಟಮ್ಮ.
ಎಂಜಲ ತಟ್ಟೆಯನ್ನು ತೆಗೆಯುತ್ತಿದ್ದ ತಾಯಮ್ಮ ಗಂಡ ಮತ್ತು ಅತ್ತೆಯ ಮಾತಿಗೆ ಅಲ್ಲಾ ಕಣಿ ಅವರೆ ಮುರುಕೊಂಡಿರೋರು ಅಂತಾ ಹೆಂಗೆ ಹೇಳ್ತಿರಾ ? ಎಂದಳು ಹೋಗೆ ಸುಮ್ನೆ ಎಂಜ್ಲುನ ಬಾನಿಗೆ ಹೂಯ್ಯೋಗೆ ಆ ಕಳ್ಳನದೇ ಕೆಲ್ಸ ಇದು.  ಈ ಕೇರಿಲಿ ಅವನು ಬಿಟ್ರೆ ಇಂಥಾ ಕುಲಗೆಟ್ಟ ಕೆಲ್ಸ ಯಾರು ಮಾಡಲ್ಲ ಎಂದ.
 ಇಲ್ಲಾ ಕಣ್ಲಾ ಮಗಾ ಈ ಸಲ ಆ ನನ್ನ ಸವತಿ ಮಗನ ಬಿಡಬಾರ್ದು. ಯಂಗಾದ್ರು ಮಾಡಿ ಆ ನನ್ಮಗನನ್ನು ಪಂಚಾಯ್ತಿಗೆ ಎಳೆಯಲೇ ಬೇಕು ಎಂದು ಪುಟ್ಟಮ್ಮ ಎದೆ ಸಟೆದುಕೊಂಡು ಹೇಳಿದಳು.
ಹ್ಞೂ ಕಣವ್ವಾ ಈ ಸಲ ಬಿಡೊದಿಲ್ಲಾ ಯಂಗಾದ್ರು ಮಾಡಿ ಕಂಡು ಹಿಡಿತ್ತೀನೀ ಬಿಡಲ್ಲಾ, ಇನ್ನು ವಸಿ ಹೊತ್ತಾಗ್ಲಿ ತಡಿ ನೀನು ಹೋಗಿ ಮಲಕೋ ಹೋಗವ್ವಾ ಎಂದ.
ಹೇಂಗೆ ಬರುತ್ತಾವ್ಲಾ ನಿದ್ದೆ.  ಉಂಡಿದ್ದು ಮೈಗೆ ಹತ್ಲಿಲ್ಲ, ಅನ್ಯಾಯವಾಗಿ ನಮ್ಮ ಹುಂಜನ್ನ ಮುರುಕ ಬಿಟ್ನಲ್ಲಾ? ಕಂದು ಬಣ್ಣದ್ದು ಹುಂಜ ಒಳ್ಳೆ ತೊಲೆ ತೂಗ್ದಾಂಗೆ ತೂಗ್ತಿತ್ತು.  ಇನ್ನೊಂದು ತಿಂಗ್ಳು ಹುಲ್ಲು ಬಡ್ದಾಯ್ತಿದ್ದಂಗೆ ದೇವರಿಗೆ


                                    - 3 -
ಹೋಗಣಾ ಅಂದುಕೊಂಡಿದ್ದೆನು.  ಅಷ್ಟೊತ್ತಿಗೆಲ್ಲಾ ಈ ಮುಂಡೆ ಮಗ ಹೇಂಗೆ ಮಾಡಿ ಬಿಟ್ನಲ್ಲಾ?  ಈ ಸಲ ನಾಗಮ್ಮನ್ನೂ ಅವಳ ಗಂಡನ್ನೂ ದೇವ್ರಿಗೆ ಕರೆಯಬೇಕು ಎನ್ನುತ್ತಾ ಈಚ್ಲು ಚಾಪೆ ಮೇಲೆ ಹಾಸಿದ್ದ ದಟ್ಟದ ಮೇಲೆ ಕಾಲು ನೀಡ್ಕೊಂಡು ಕೈಗೆ ಎಲೆ ಅಡಿಗೆ ಚೀಲ ತೆಗೆದುಕೊಂಡ್ಲು.  ಬೆಟ್ಟೇಗೌಡ ಎದ್ದು ಅಡಿಗೆ ಕೋಣೆಗೆ ಹೋದ ಅಲ್ಲಿ ತಾಯಮ್ಮ ಅಳಿದುಳಿದ ಕೆಲ್ಸವನ್ನು ಮಾಡ್ತಿದ್ಲು.  ಒಲೆಯ ಕೆಂಡದಲ್ಲಿ ಹಾಲು ಕೆಂಪಗೆ ಕಾಯ್ತಿತ್ತು.  ಬೆಟ್ಟೇಗೌಡ ಒಲೆ ಮುಂದೆ ಕುಂತ್ಕೊಂಡನು.

ಏನಾದ್ರೂ ಆಗ್ಲಿ ಹುಂಜ ಮುರ್ಕೊಂಡು ತಿಂದಿರೋ ಅವ್ನಾ ಪಂಚಾಯ್ತಿಯಲ್ಲಿ ಎಲ್ರೂ ಕೈಲಿ ಚೆನ್ನಾಗಿ ಉಗಿಸ್ತೀನಿ ಎಂದನು.  ತಾಯಮ್ಮನಿಗೆ ಸಂಜೆಯಿಂದ ಅವ್ವ ಮಗನ ಮಾತನ್ನು ಕೇಳಿ ಸಹನೆಯ ಕಟ್ಟೆ ಒಡೆಯಿತು.  ಜೋರಾಗಿ ಅಲ್ಲಾ ನೀವಿಬ್ಬರೂ ಕಂಡೀರಾ, ಅದೇಕೆ ಹಾಂಗೆ ಆಡ್ತೀರಾ? ಹೊತ್ತಾರೆ ಹೊತ್ಗೆ ಬಂದ್ರು ಬರಬಹುದು. ಯಾರೋ ಕಂಡವರೆಗೆ ಬೈದು ಕುಂಡಿಗೆ ಹರಬೆ ಕಾಣ್ದೆ ಹೋದರಂತೆ ಹಾಂಗಾಯಿತು ಇದು ಎಂದಳು.  ಬೆಟ್ಟೇಗೌಡ ತಾಯಮ್ಮನ ಮಾತಿಗೆ ಎದ್ದು ಕೊಸಾರನೆ ಹಟ್ಟಿಗೆ ಹೋದನು.  ಈ ಮಾತು ನಡ್ಮನೆಯಲ್ಲಿದ್ದ ಪುಟ್ಟಮ್ಮನ ಕಿವಿಗೂ ಬಿತ್ತು.  ಅಲ್ಲಿಂದಲೇ ತಾಯಮ್ಮನಿಗೆ ಆಹಾ ಇವಳೊಬ್ಬಳೇ ಒಳ್ಳೆಯವಳು ನಾವಿಬ್ಬರು ಕೆಟ್ಟವರು ಯಂಗೆ ಮಾತಾಡ್ತಾಳೆ ನೋಡು ಇವಳಿಗೆ ಮನೆಯವರಿಗಿಂತ ಅನ್ನಿಗರೇ ಚಂದ.  ನಾನು ಸಾವಿರಸಲ ಬಡ್ಕೊಂಡೆ ಈ ಗೊಡ್ಡಿನ ಬಿಟ್ಟು ಯಾವಳ್ನಾರು ಲಗ್ನ ಆಗು ವಂಶಕ್ಕೆ ಮುಂದೆ ಏನ್ಗತಿ ಅಂತಾ. ನನ್ಮಾತು ಕಿವಿ ಮೇಲೆ ಹಾಕೊಳ್ದೆ ಹೋದ ಈ ನನ್ಮಗ ಎಂದು ನಂಜಿಲ್ಲದ ನಾಲ್ಗೆಯಿಂದ ಒದರ ತೊಡಗಿದಳು.  ತಾಯಮ್ಮನಿಗೆ ಗೊಡ್ಡಿ ಎನ್ನೋ ಶಬ್ದ ಈಟಿಯಲ್ಲಿ ಚುಚ್ಚಿದಂತಾಯಿತು ಮನಸ್ಸಿಗೆ.  ಇಂತಹ ಬೈಗುಳದ ಮಾತ್ಗಳಲ್ಲಿ ಗೊಡ್ಡಿ ಅನ್ನೋ ಶಬ್ದ ಪಾಪ ತಾಯಮ್ಮನಿಗೆ ಜೀವ ಹಿಂಡುತ್ತಿತ್ತು.  ಮುಂದೆ ಮಾತ್ನಾಡಲು ಮಾತುಗಳೇ ಬರಲಿಲ್ಲ.  ಕಣ್ಗಳಿಂದ ಹನಿಗಳು ಬೀಳತೊಡಗಿದವು.  ಸೆರಗಿನಿಂದ ಬಾಯಿ ಮುಚ್ಚಿಕೊಂಡು ಬಿಕ್ಕಳಿಸುತ್ತಾ ಹಾಸಿಗೆ ಮೇಲೆ ಮುದುರಿಕೊಂಡಳು.  ಮದ್ವೆಯಾಗಿ ಹನ್ನೆರಡು ವರ್ಷದ ಮೇಲೂ ತನಗೆ ಮಕ್ಳಾಗಲಿಲ್ಲ  ಈ ಮುದುಕಿ ಬೈಯೋದ್ಬಿಡಲಿಲ್ಲ.  ಗಂಡನಿಗೆ ಹೇಳಿ ಹೇಳಿ ಸಾಕಾಗಿತ್ತು.  ಪೇಟೆಗೆ ಹೋಗಿ ಡಾಕ್ಟರ್ ಹತ್ರ ತೋರ್ಸೋಣ ಮಕ್ಕಳು ಆಗ್ತಾವಂತೆ ಅಂತ ಎಲ್ರೂ ಹೇಳ್ತಾರೆ ಎಂದು.  ಬೆಟ್ಟೇಗೌಡ ಸೊಂಬೇರಿ ಜೊತೆಗೆ ಜುಗ್ಗುತನದವನು  ಎಲ್ಲಿ ದುಡ್ಡು ಖಚರ್ಾಗ್ಬಿಡುತ್ತೋ ಅಂತಾ ಪ್ರತಿಯೊಂದ್ಕು ಲೆಕ್ಕ ಹಾಕೋನು.  ಹೇಂಗಾದ್ರು ಮಾಡಿ ಊರ್ಗೆ ದೊಡ್ಡಕುಳ ಅನ್ನಿಸ್ಕೋ ಬೇಕೆನ್ನೋ ಜಾಯಮಾನದೋನು.  ತಾಯಮ್ಮ ಕಂಡ ಕಂಡ ದೇವ್ರಿಗೆಲ್ಲಾ ಹರಕೆ ಹೊತ್ತು.  ದಿನಾ ನೇಮಾ, ನಿಷ್ಠೆ ಎಲ್ಲಾ ಮಾಡಿದ್ಲು, ಯಾರೇನೇ ಹೇಳಿದ್ರೂ ಹಾಗೆಲ್ಲಾ ಮಾಡಿದ್ಲು.  ನಾಟಿ ಔಷದ, ಆ ಬೇರು, ಈ ನಾರು ಅಂತಾ ಎಲ್ಲಾ ಆಯ್ತು, ತಾಯಮ್ಮನಿಗೆ ಮಕ್ಕಳ ಫಲ ಮಾತ್ರ ಕಾಣ್ಲಿಲ್ಲ.

ಇಷ್ಟಾದ್ರೂ ಬೆಟ್ಟೇಗೌಡ ಮಾತ್ರ ಒಂದಿನವೂ ನಮ್ಗೆ ಮಕ್ಳಾಗಲಿಲ್ಲ ಅಂತಾ ತಾಯಮ್ಮನಿಗೆ ಒಂದ್ಮಾತು ಬೈಯಲಿಲ್ಲ.  ಒಂದೇ ತರದ ಪ್ರೀತಿಯಿಂದ ನೋಡ್ತಿದ್ದ.  ಆದರೆ ಪುಟ್ಟಮ್ಮ ಮಾತ್ರ ಸಮಯ ಸಿಕ್ತಾಗೆಲ್ಲಾ ಮೂತಿಗೆ ತಿವಿತ್ತಿದ್ದಳು. ಇಷ್ಟಾದ್ರೂ ತಾಯಮ್ಮನಿಗೆ ಮಂಜೇಗೌಡನ ಸಂಸಾರದ ಮೇಲೆ ಎಲ್ಲಿಲ್ಲದ ಅಕ್ಕರೆ ಪ್ರೀತಿ.  ಯಾಕೆಂದರೆ ಮಂಜೇಗೌಡ ಭಾವ ಆಗಬೇಕು.  ಕಾಳಮ್ಮ ವಾರಗಿತ್ತಿ. ತಾಯಮ್ಮ ಮದುವೆಯಾಗಿ ಬಂದ ಹೊಸದರಲ್ಲಿ ಇವರದು ತುಂಬು ಕುಟುಂಬವಾಗಿತ್ತು.  ತಾಯಮ್ಮನ ಮಾವನಿಗೆ ಮಂಜೇಗೌಡ ಮೊದಲ ಹೆಂಡತಿ ಮಗ.  ಅವರ ತಾಯಿ ಮೊದಲ ಹೆರಿಗೆಯಲ್ಲಿ ತೀರಿಕೊಂಡ ಮೇಲೆ, ಪುಟ್ಟಮ್ಮನನ್ನು ಎರಡನೇ ಮದುವೆಯಾಗಿದ್ದರು.  ಬೆಟ್ಟೇಗೌಡ ಮತ್ತು ನಾಗಮ್ಮ ಪುಟ್ಟಮ್ಮನ ಹೊಟ್ಟೆಯಲ್ಲಿ ಹುಟ್ಟಿದವರು. ಲೋಕರೂಢಿಯಂತೆ ಪುಟ್ಟಮ್ಮ ಮಲತಾಯಿ ಆಟವಾಡಿದ್ದಾಳೆ.  ಆದರೆ ಮಾವನ ಮುಂದೆ ಇದೆಲ್ಲಾ ನಡೆದಿಲ್ಲ.  ಮಂಜೇಗೌಡನಿಗೆ ಒಳ್ಳೆ ಕಡೆಯಿಂದ ಹೆಣ್ಣು ತಂದು ಮದ್ವೆ ಮಾಡಿದರು.  ಕಾಳಮ್ಮನು ಸಹ ಒಳ್ಳೆಯ ಮನಸ್ಸಿರೋ ಹೆಣ್ಣು.  ಬಹಳ ಸಹನೆಯಿಂದ ಭಯ ಭಕ್ತಿಯಿಂದ ಅದರಲ್ಲೂ ಪುಟ್ಟಮ್ಮನಂತಹ ಅತ್ತೆ ಜೊತೆ ಹೇಗೋ ಐದಾರು ವರ್ಷಗಳು ಸಂಸಾರ ಮಾಡಿದ್ದಳು . ಆ ಮೇಲೆ ತಾಯಮ್ಮ ಬೆಟ್ಟೇಗೌಡನ ಹೆಂಡತಿಯಾಗಿ ಆ ಮನೆಗೆ ಬಂದಳು.  ಬಂದ ಹೊಸದರಲ್ಲಿ ಪುಟ್ಟಮ್ಮ ಕಾಳಮ್ಮನ ಮೇಲೆ ಇಲ್ಲದ ಸಲ್ಲದ ಚಾಡಿ ಹೇಳಿ ಅವಳ ಮೇಲೆ ದ್ವೇಷ ಬರುವ ಹಾಗೆ ಮಾಡಿದಳು.  ಆದರೆ ತಾಯಮ್ಮ ಮಾತ್ರ ಅವುಗಳನ್ನೆಲ್ಲಾ ಆ ಕಿವಿಯಿಂದ ಕೇಳಿಸಿಕೊಂಡು ಈ ಕಿವಿಯಿಂದ ಬಿಡ್ತಿದ್ದಳು.  ಕಾಳಮ್ಮನ ಸ್ವಭಾವ ನಡೆತೆ ಕಂಡು ಬಹಳ ಮೆಚ್ಚಿಕೊಂಡಿದ್ದಳು. ಅವಳ ಜೊತೆ ತಾನು ಸಹ ಜೋಡಿ ಎತ್ತಿನಂತೆ ಸಮವಾಗಿ ಸಂಸಾರಕ್ಕೆ ದುಡಿದಳು.  ಕಾಳಮ್ಮನು ಅಷ್ಟೇ ತಾಯಮ್ಮನನ್ನು ತಂಗಿಯಂತೆ ಕಂಡಳು. ಅವಳಿಗೆ ಮಕ್ಕಳಾಗಲಿಲ್ಲ ಅಂತ ಎಂದೂ ಒಂದು ಮಾತನಾಡುತ್ತಿರಲಿಲ್ಲ.  ತಾಯಮ್ಮ ಅವಳ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದಳು. ಪುಟ್ಟಮ್ಮನಿಗೆ ಮಾತ್ರ ಇವೆಲ್ಲಾ ನೋಡಿ ಸಹಿಸುತ್ತಿರಲಿಲ್ಲ.  ಹೊಟ್ಟೆಯ ಒಳಗೆ ಬೆಂಕಿ ಹಾಕಿಕೊಂಡಂತೆ ಆಡುತ್ತಿದ್ದಳು. ತಾಯಮ್ಮ ನನ್ನ





                                    - 4 -
ಸ್ವಂತ ಸೊಸೆ.  ಕಾಳಮ್ಮ ಸವತಿ ಮಗನ ಹೆಂಡತಿ. ಅವರಿಬ್ಬರು ಹೊಂದಿಕೊಂಡು ಹೋಗುವುದು ಹೊಟ್ಟೆಯೊಳಗೆ ಕಿವಿಚಿದಂತೆ ಆಗುತ್ತಿತ್ತು.  ತಾನು ಮತ್ತು ಸೊಸೆ ಸೇರಿ ಕಾಳಮ್ಮನಿಗೆ ಹಿಂಸೆ ನೀಡಬೇಕೆಂಬ ಕನಸು ಕಂಡಿದ್ದಳು.  ಆದರೆ ಇದೆಲ್ಲಾ ಉಲ್ಟ ಆಗಿತ್ತು.  ಏನಾದ್ರು ಮಾಡಿ ಇಬ್ಬರ ನಡುವೆ ಬೆಂಕಿ ತಂದು ಹಾಕಬೇಕೆಂಬ ದುರುದ್ದೇಶದಿಂದ ಸಮಯ ಕಾಯುತ್ತಿದ್ದಳು.  ಆದರೆ ವಿಧಿಯಾಟನೇ ಬೇರೆಯಾಗಿತ್ತು.  ಮಂಜೇಗೌಡನ ಅಪ್ಪ ಇದ್ದಕ್ಕಿದ್ದ ಹಾಗೇ ಕಾಯಿಲೆ ಬಂದು ಹಾಸಿಗೆ ಹಿಡಿದರು.  ಮನೆಯವರೆಲ್ಲರೂ ಮಂಕಾದರು.  ಅದರಲ್ಲೂ ಮಂಜೇಗೌಡ-ಕಾಳಮ್ಮನಿಗೆ ಆಕಾಶವೇ ಕಳಚಿ ಬಿದ್ದಾಂತಾಯಿತು.  ಅವರಿಗೆ ಬೆಂಬಲವಾಗಿದ್ದ ಮಾವ ಹೋಗಿಬಿಟ್ಟರೆ ಮುಂದೆ ಹೇಗೆ? ಎಂಬುದೇ ಅವರಿಗೆ ಚಿಂತೆಯಾಗಿತ್ತು.  ಮಂಜೇಗೌಡನ ಅಪ್ಪನಿಗೆ ಮೊದಲಿನಿಂದ ಪುಟ್ಟಮ್ಮನ ಅನಿಷ್ಠ ಬುದ್ದಿ ಗೊತ್ತಿತ್ತು.  ವಿಧಿ ಇಲ್ಲದೆ ಸಂಸಾರ ನಡೆಸಿಕೊಂಡು ಬಂದಿದ್ದರು.  ತಾನು ಸತ್ತ ಮೇಲೆ ಮಂಜೇಗೌಡನಿಗೆ ಅನ್ಯಾಯ ಮಾಡುತ್ತಾಳೆ ಎಂದು ತಿಳಿದು ತಾನು ಸಾಯುವ ಮೊದಲೇ ಆಸ್ತಿ ಭಾಗ ಮಾಡಬೇಕೆಂದು ಊರಿನ ಹಿರಿಯರ ಸಮ್ಮುಖದಲ್ಲಿ ಬೆಟ್ಟೇಗೌಡ ಮತ್ತು ಮಂಜೇಗೌಡನಿಗೆ ಆಸ್ತಿಯನ್ನು ಸಮಪಾಲು ಹಂಚಿದರು. ಆದರೆ ಇಲ್ಲಿ ಒಂದು ಸಣ್ಣ ತಪ್ಪು ಮಾಡಿಬಿಟ್ಟರು.  ಮಂಜೇಗೌಡನಿಗೆ ಐದು ಜನ ಮಕ್ಕಳು, ಸಂಸಾರ ದೊಡ್ಡದು  ಎಂದು ಒಂದು ಎಕರೆ ಜಾಸ್ತಿ ಕೊಟ್ಟು ಸ್ವರ್ಗ ಸೇರಿಕೊಂಡರು.  ಇದೊಂದೇ ಪುಟ್ಟಮ್ಮನಿಗೆ ದೊಡ್ಡ ವಿಷಯವಾಯ್ತು.  ಅತ್ತು ಕರೆದು ದೊಡ್ಡ ರಂಪಾ ಮಾಡಿದ್ಲು. ಆದರೆ ಪಂಚಾಯ್ತಿ ಇದನ್ನು ಒಪ್ಪಲಿಲ್ಲ.  ಅಲ್ಲಿಂದ ಶುರುಮಾಡಿದ್ಲು ಮಂಜೇಗೌಡನ ಸಂಸಾರದ ಮೇಲೆ ಕತ್ತಿ ಮಸೆಯಲು ಪುಟ್ಟಮ್ಮ. ಜೊತೆಗೆ ಬೆಟ್ಟೇಗೌಡ ಕೂಡ ತಾಯಿಯಂತೆ ಮಗ, ತಂಗಿ ನಾಗಮ್ಮ ಬೇರೆ ಆಗಾಗ ಬಂದು ಬೆಂಕಿ ಹಾಕಿ ಹೋಗುತ್ತಿದ್ದಳು.  ಪ್ರತಿಯೊಂದು ಸಣ್ಣ ಪುಟ್ಟ ವಿಷಯಕ್ಕೂ ಮಂಜೇಗೌಡ ಕಾಳಮ್ಮನ ಮೇಲೆ ಕಾಲು ಕೆರ್ಕೊಂಡು ಜಗಳಕ್ಕೆ ಹೋಗುತ್ತಿದ್ರು ಅವ್ವ ಮಗ.

ಇವರಿಬ್ಬರು ಏನೇ ಬೈದರೂ, ತೊಂದರೆ ಕೊಟ್ರೂನು ಮಂಜೇಗೌಡ ಮತ್ತು ಕಾಳಮ್ಮ ಮಾತ್ರ ಇವರ ಮೇಲೆ ಜಗಳ ಮಾಡ್ತಿರಲಿಲ್ಲ, ತಿರುಗಿ ಬೈಯ್ತಿರಲಿಲ್ಲ.  ತಾವಾಯಿತು ತಮ್ಮ ಕೆಲ್ಸವಾಯ್ತು ಎಂಬಂತೆ ಇದ್ದರು.

     ಹೀಗೆ ಐದಾರು ವರ್ಷವಾಗಿತ್ತು. - ಮಾತುಕತೆ ಏನೀರಲಿಲ್ಲ. ಕಾಳಮ್ಮ ಮಾತ್ರ ಕದ್ದು ಮುಚ್ಚಿ ತಾಯಮ್ಮನನ್ನು ಹೊಲ, ಗದ್ದೆ ತೋಟದ ಹತ್ರ ಮಾತಾಡಿಸುತ್ತಿದ್ದಳು.  ತಾಯಮ್ಮನೂ ಅಷ್ಟೆ ಅತ್ತೆ ಗಂಡನ ಕಣ್ಣು ತಪ್ಪಿಸಿ ಮಕ್ಕಳಿಗೆ ಅದೂ ಇದೂ ಅಂತಾ ಕೊಡುವುದು, ಮಾತಾಡಿಸುವುದು ನಡೆದಿತ್ತು.  ಇಂತಹದನ್ನೆಲ್ಲಾ ಪುಟ್ಟಮ್ಮನಿಗೆ ವರದಿ ಮಾಡಲು ಇವರ ಅಣ್ಣ-ತಮ್ಮಂದಿರ ಪೈಕಿ ಚೆನ್ನಮ್ಮ ಅಂತಾ ಒಬ್ಬಳು ಮಾಟಗಾತಿ ಇದ್ಲು.  ಕೆಲವೊಮ್ಮೆ ಪುಟ್ಟಮ್ಮ ಈ ವಿಷಯದಲ್ಲಿ ತಾಯಮ್ಮನಿಗೆ ಕಪಾಳಕ್ಕೆ ಹೊಡೆದಿದ್ದು ಇತ್ತು. ಆದರೆ ತಾಯಮ್ಮ ಮಾತ್ರ ಇದ್ಯಾವುದಕ್ಕೂ ಜಗ್ಗದೆ ಅದೇ ರೀತಿ ಮಾಡ್ತಿದ್ದಳು.  ಇಂತಹ ಕಳೆದು ಹೋದ ನೆನಪುಗಳು ತಾಯಮ್ಮನ ಕಣ್ಣೀರನ್ನು ಕಡಿಮೆ ಮಾಡಿ ನಿದ್ದೆಯಿಂದ ಮುಚ್ಚಿಟ್ಟವು.  ಇತ್ತ ಹೊರಗಡ ಹೋದ ಬೆಟ್ಟೇಗೌಡ ಜಗಲಿ ಮೇಲೆ ಕುಳಿತ್ಕೊಂಡು ಬೀಡಿ ಸೇದುತ್ತಿದ್ದನು.

     ಕಾಳಮ್ಮ ಊಟವಾದ ಮೇಲೆ ಏಂಜಲನ್ನು ತಂದು ಹೊರಗಡೆಗೆ ಚೆಲ್ಲಿ ಹೋದ್ಲು.  ಅಲ್ಲೇ ಜಗಲಿ ಮೇಲಿದ್ದ ನಾಯಿ ತಕ್ಷಣ ಎಗರಿ ಹೋಗಿ ಎಂಜಲು ಚೆಲ್ಲಿದ ಜಾಗದಲ್ಲಿ ಮೂಸಿ, ಏನೂ ಸಿಗದೆ ಮತ್ತೆ ಅಲ್ಲಿಗೆ ಬಂದು ಬಿದ್ದುಕೊಂಡಿತು.  ಇದನ್ನೇ ಗಮನಿಸುತ್ತಿದ್ದ ಬೆಟ್ಟೇಗೌಡನಿಗೆ ಒಂದು ಯೋಚನೆ ಬಂತು.  ಅಲ್ಲಾ ಇವತ್ತೆ ಅವರೇನಾದರೂ ಹುಂಜನನ್ನು ಕೊಯ್ದು ಸಾರು ಮಾಡಿದ್ರೆ.  ಮೂಳೆ ಚೂರು ಎಂಜಲು ಜೊತೆ ಹೊರಗಡೆನೇ ಹಾಕಬೇಕಾಗಿತ್ತು.  ನಾಯಿ ಖಂಡಿತ ಅದನ್ನು ಕಡಿಯುತ್ತಿತ್ತು.  ಆದರೆ ಅದು ಮೂಸಿ ಸುಮ್ನೆ ವಾಪಸ್ಸು ಬಂದಿದ್ದು ನೋಡಿದ್ರೆ ಅವರು ಹುಂಜವನ್ನು ಹಿಡಿದುಕೊಂಡಿರುವುದಿಲ್ಲ ಅಲ್ವಾ ? ಅನ್ನಿಸಿತು, ಆದರೂ ತಲೆಯಲ್ಲಿದ್ದ ಅನುಮಾನ ಮಾತ್ರ ಹೋಗಲಿಲ್ಲ. ಬಹಳ ಹೊತ್ತಿನವರೆಗೂ ಜಗಲಿ ಮೇಲೆ ಕುಳಿತ್ಕೊಂಡು ಯೋಚಿಸುತ್ತಿದ್ದ.  ಮಂಜೇಗೌಡನ ಮನೆ ದೀಪ ಆರಿದ ಮೇಲೆ ಮೆಲ್ಲಗೆ ಅವರ ಅಡುಗೆ ಕೋಣೆಯ ಕಿಟಕಿಯ ಹತ್ತಿರ ಹೋಗಿ ಮೂಗನ್ನು ಜೋರಾಗಿ ಎಳೆದುಕೊಂಡು ವಾಸನೆ ಕಂಡು ಹಿಡಿಯಲು ಹೋದನು.  ಅಲ್ಲೂ ಏನೂ ಅಂತಾ ಘಮ ಬರಲಿಲ್ಲ.  ಮತ್ತೆ ಬಂದು ಜಗಲಿ ಮೇಲೆ ಕುಳಿತ್ಕೊಂಡು ಬಾಯಿಗೆ ಮೋಟು ಬೀಡಿ ಹಾಕಿಕೊಂಡು ಬೆಂಕಿ ಹಚ್ಚಿದ ಎಷ್ಟು ಹೊಗೆ ಎಳೆದರೂ ತಲೆಯಲ್ಲಿ ಏನೂ ಹೊಳೆಯಲಿಲ್ಲ.  ಬೆಳಿಗ್ಗೆ ನೋಡೋಣ ಎಂದುಕೊಂಡು ಮನೆಯೊಳಗೆ ಹೋಗಿ ಬಿದ್ಕೊಂಡನು.  ಬೆಳ್ಳಂಬೆಳಗ್ಗೆನೇ ಎದ್ದ ತಾಯಮ್ಮ ದನಗಳನ್ನು ಕೊಟ್ಟಿಗೆಯಿಂದ ಹೊರಕ್ಕೆ ಕಟ್ಟಿಹಾಕಿ, ಕೋಳಿಗಳನ್ನೆಲ್ಲಾ ಹೊರಗೆ ದೂಡಿ, ಕಸ ಬಳಿಯಲು ಶುರುಮಾಡಿದಳು. ಹಟ್ಟಿ ಕಸ ಗುಡಿಸುವಾಗ ಒಂದು ಸಲ ಹಟ್ಟಿ ಕಸ ಗುಡಿಸುತ್ತಿದ್ದ ಕಾಳಮ್ಮನನ್ನು ನೋಡಿದಳು.  ಕಾಳಮ್ಮ ಸಹ ಕಸ ಗುಡಿಸುತ್ತಲೆ ತಾಯಮ್ಮನ ಮುಖವನ್ನು ಒಮ್ಮೆ ನೋಡಿ ತನ್ನ ಪಾಡಿಗೆ

                                    - 5 -
ಕಸ ಗುಡಿಸಿಕೊಂಡು ಮುಂದಕ್ಕೆ ಹೋದಳು.  ತಾಯಮ್ಮನಿಗೆ ಹುಂಜವನ್ನು ಇವರು ಹಿಡಿದುಕೊಂಡಿರುವುದಿಲ್ಲ.  ಅನ್ಯಾಯವಾಗಿ ಇವರ ಮೇಲೆ ಮುದುಕಿ ಬೈಯುತ್ತಾಳಲ್ಲಾ ಅಂದ್ಕೊಂಡು ಒಳಕ್ಕೆ ಹೋದಳು.  ಅಷ್ಟೋತ್ತಿಗೆಲ್ಲಾ ಪುಟ್ಟಮ್ಮ ಎದ್ದು, ಹಾಸ್ಗೆಯ ಮೇಲೆ ಸುಪ್ರಬಾತ ಶುರು ಮಾಡಿದ್ಲು.  ತಾಯಮ್ಮನಿಗೆ ಮುದುಕಿದು ಇದು ಮಾಮೂಲಿ ಎಂದು ತನ್ನ ಮುಂದಿನ ಕೆಲ್ಸ ನೋಡಲು ಹೋದ್ಲು. ಬೆಟ್ಟೇಗೌಡ ಅವ್ವನ ಸುಪ್ರಬಾತಕ್ಕೆ ಎಚ್ಚರಗೊಂಡು ಎದ್ದು ಕೂತನು.  ತಲೆ ಕೆರೆದುಕೊಂಡು ಏನವ್ವಾ ಹೊತ್ತಾರೆನೆ ಶುರು ಮಾಡಿದ್ದೀಯಲ್ಲಾ ವಸಿ ಸುಮ್ನೆ ಇರಬಾರದೇ ? ಎಂದ. ಪುಟ್ಟಮ್ಮ ಎದ್ದು ಕಂಬ್ಳಿ ಜಾಡಿಸುತ್ತಾ  ಎದ್ದೇಳೋ ಮೂದೇವಿ, ಎದ್ದು ಮಾರೇಗೌಡನ ಮನೆಗೆ ಹೋಗಿ ಹಿಂಗಿಂಗೇ ಆಗೈತೆ ಏನಾದ್ರೂ ಮಾಡಿ ಈ ಸಲ ಅವನ ಪಂಚಾಯ್ತಿಗೆ ಎಳೆದು ದಂಡ ಹಾಕಿಸಿ ಅಂತಾ ಕೇಳ್ಕೊಂಡು ಬರೋಗ್ಲಾ ಎಂದಳು. ಅವ್ವನ ಮಾತಿಗೆ ಏನು ಮಾತಾಡದೆ ಎದ್ದು ಪಂಚೆ ಕಟ್ಕೊಂಡು ತೋಟದ ಕಡೆಗೆ ಹೋದನು.  ಕೆರೆಕಡೆಯ ಕೆಲ್ಸ ಮುಗಿಸಿ ಮಾರೇಗೌಡನ ಮನೆಯ ಹತ್ತಿರ ಬಂದನು. ಮಾರೇಗೌಡ ಪಂಚಾಯ್ತಿ ಹೇಳುವ ಮುಖ್ಯಸ್ಥ ಸ್ವಲ್ಪ ಹೈನಾತಿ ಮನುಷ್ಯ. ಮುಖ ನೋಡಿ ಮಣೆ ಹಾಕುವವನು.  ಊರಿಗೆ ಬಾರಿ ಕುಳ ಬೇರೆ.  ಬೆಟ್ಟೇಗೌಡ ಹೋದಾಗ ಮನೆಯ ಪಡಸಾಲೆಯಲ್ಲಿ ಕುಳಿತು ಯಾವುದೊ ಲೆಕ್ಕಪತ್ರ ನೋಡ್ತಿದ್ದ.  ಬೆಟ್ಟೇಗೌಡನ ನೋಡಿ ಓಹೋ ಬೆಟ್ಟೇಗೌಡ ಬಾರೋ ಒಳಗೆ ಬಾ, ಏನು ವಿಷಯ ಬೆಳಗ್ಗೆ ಬೆಳಗ್ಗೆನೇ ಬಂದಿದ್ದೀಯಾ ? ಎಂದನು.  ಬೆಟ್ಟೇಗೌಡ ತಲೆಕೆರ್ಕೊಂಡು ಏನಿಲ್ಲಾ ಅಂತಾ ಶುರುಮಾಡಿ ನಡೆದಿದ್ದನೆಲ್ಲಾ ವಿವರಿಸಿ ಕೊನೆಗೆ ಪಟೇಲ್ರೇ ಅದು ಎಷ್ಟಾದ್ರೂ ಖಚರ್ಾಗಲಿ, ಹೇಂಗಾದ್ರೂ ಮಾಡಿ ಈ ಸಲ ಅವನಿಗೆ ಪಂಚಾಯ್ತಿಯಲ್ಲಿ ಊರವರ ಎದ್ರಿಗೆ ಉಗಿಬೇಕು  ಈ ವಿಷ್ಯ ನಮ್ಮೊಳಗೆನೇ ಇರ್ಲಿ  ನೀವು ಏನು ಬೇಕಾದ್ರೂ ಕೇಳಿ ಅಂತಾ ಮೆಲ್ಲಗೆ ಹೇಳ್ದ.  ಮಾರೇಗೌಡ ಬೆಟ್ಟೇಗೌಡನ ಮಾತಿಗೆ ಮನಸ್ಸಿನಲ್ಲಿ ಮಂಡಿಗೆ ಹಾಕಿದ. ಅವನಿಗೆ ಅಣ್ಣ-ತಮ್ಮಂದಿರ ಜಗಳದಿಂದ ತನಗೆ ಏನಾದ್ರೂ ಲಾಭವಾಗುತ್ತಾ ಅಂತ ಯೋಚಿಸಿದ ಆದರೂ ಸರಿಯಾದ ಸಾಕ್ಷಿ ಇಲ್ಲದೆ ಮಂಜೇಗೌಡನ ಹೇಗೆ ಬಲಿ ಹಾಕುವುದು ಎಂದುಕೊಳ್ಳುತ್ತಾ ಕೊನೆಗೆ ಬೆಟ್ಟೇಗೌಡನಿಗೆ  ನೋಡು ಬೆಟ್ಟೇಗೌಡ ಸಾಕ್ಷಿ ಇಲ್ದೆ ಏನೂ ಮಾಡುವಾಗಿಲ್ಲ.  ಅದು ಹತ್ತು ಜನದ ಪಂಚಾಯ್ತಿ ಬೇರೆ ಬೇರೆಯವರಿಗೆ ನಾನು ನಿಷ್ಠೂರವಾಗುವುದು ನನಗಿಷ್ಟವಿಲ್ಲ.  ನೀನು ಹೆಂಗಾದ್ರೂ ಮಾಡಿ ಯಾವುದಾದ್ರೂ ಒಂದು ಸಣ್ಣ ಸಾಕ್ಷಿ ತಗೊಂಡು ಬಾ ಆಗ ನೋಡು ನಾನು ಏನು ಮಾಡ್ತೇನೆ ಅಂತಾ ಎಂದು ಮೀಸೆ ಮೇಲೆ ಕೈ ಹಾಕಿದ.  ಆಗ ಬೆಟ್ಟೇಗೌಡನಿಗೆ ಥಟ್ಟನೆ ಕೆಲವು ಯೋಚನೆಗಳು ತಲೆಯಲ್ಲಿ ಹೊಳೆಯ ತೊಡಗಿದವು  ಸರಿ ಪಟೇಲ್ರೇ ನೋಡ್ತೀರಿ ಇವತ್ತೆ ಹೇಗಾದ್ರೂನು ಮಾಡಿ ಸಾಕ್ಷಿ ಹುಡುಕಿಕೊಂಡೆ ಬರುತ್ತೇನೆ ಎಂದು ಎದ್ದು ದಡದಡನೆ ಮನೆಯ ಕಡೆಗೆ ಬಂದನು.  ಬಂದವನೇ ಕೊಟ್ಟಿಗೆಗೆ ಹೋದ ಅಲ್ಲಿ ತಿಪ್ಪೆಗೆ ಹಾಕಿ ಬರಲು ತಾಯಮ್ಮ ಕೊಟ್ಟಿಗೆ ಕಸವನ್ನು ಮಂಕರಿಗೆ ತುಂಬಿಟ್ಟಿದ್ದಳು.  ತಾನೊಬ್ಬನೇ ಕಸದ ಮಂಕರಿ ಹೊತ್ಕೊಂಡು ತಿಪ್ಪೆಗೆ ಸುರಿಯಲು ಹೊರಟನು.  ಹಿತ್ತಲ ಬಳಿ ಮಂಜೇಗೌಡ ಮತ್ತು ಬೆಟ್ಟೇಗೌಡ ಇಬ್ಬರ ಮನೆಯ ತಿಪ್ಪೆಗುಂಡಿಗಳು ಅಕ್ಕ-ಪಕ್ಕ ಇದ್ದವು. ಅಲ್ಲಿ ಹೋಗಿ ತನ್ನ ತಿಪ್ಪೆಗುಂಡಿಯೊಳಗೆ ಕಸ ಸುರಿದು ಸುತ್ತಮುತ್ತ ನೋಡಿದ ಯಾರು ಕಾಣಿಸ್ಲಿಲ್ಲ.  ಅಲ್ಲೇ ಇದ್ದ ಗುದ್ದಲಿಯಿಂದ ಮಂಜೇಗೌಡನ ತಿಪ್ಪೆಗುಂಡಿಯ ಕೆದುಕಿ, ಕೆದುಕಿ ನೋಡಿದ ಎಲ್ಲೂ ಕೋಳಿ ಪುಕ್ಕಾನೇ ಕಾಣಿಸ್ಲಿಲ್ಲ.  ಅವನ ಪ್ರಕಾರ ಇದು ಮೊದಲನೆಯ ಸಾಕ್ಷಿಯಾಗಿತ್ತು.  ಅಲ್ಲೇ ಹಿತ್ತಲ ಸುತ್ತಮುತ್ತ ನೋಡಿದ ಎಲ್ಲಿ ಹುಡುಕಿದ್ರೂ, ಕೆದಕಿದ್ರೂ, ಎಲ್ಲೂ ಕೋಳಿ ಪುಕ್ಕಾನೇ ಕಾಣಿಸ್ಲಿಲ್ಲಾ.  ನಿರಾಸೆಯಿಂದ ವಾಪಸ್ಸು ಮನೆಗೆ ಬಂದು ಕೈ ಕಾಲು ಮುಖ ತೊಳೆದುಕೊಂಡು ಪಡಸಾಲೆಯಲ್ಲಿ ಕುಳಿತ್ಕೊಂಡನು.  ಅಡುಗೆ ಮನೇಲಿ ತಾಯಮ್ಮ ರೊಟ್ಟಿ ತಟ್ಟುತ್ತಿದ್ದಳು. ಪುಟ್ಟಮ್ಮ (ಬೆಣ್ಣೆ) ಮಜ್ಜಿಗೆ ಕಡೆಯುತ್ತಿದ್ದಳು. ಆ ಕಡೆಯಿಂದ ಮಂಜೇಗೌಡನ ಮನೇಲಿ ಮಕ್ಕಳ ಗದ್ದಲ ಕೇಳಿಬರುತ್ತಿತ್ತು.  ಮುಂದಿನ ಸಾಕ್ಷಿ ಯಾವುದೆಂದು ಯೋಚಿಸುತ್ತಾ ಕುಂತನು.

  ಇತ್ತ ಕಾಳಮ್ಮ ಕೊಟ್ಟಿಗೆ ಕಸ ಗುಡಿಸಿ, ಕಸ ತುಂಬಲು ಮಂಕರಿ ನೋಡಿದ್ಲು, ಅಲ್ಲಿ ಇರ್ಲಿಲ್ಲ, ಏನಾಯಿತು ? ಎಂದು ಎಲ್ಲಾ ಕಡೆ ಹುಡುಕಿದ್ಲು  ಕಸ ತುಂಬೋ ಮಂಕರಿ ಕಾಣಿಸ್ಲಿಲ್ಲ.  ಅಲ್ಲೆ ಕುಡುಗೋಲು ಮಸೀತಾ ಇದ್ದ ಗಂಡನನ್ನು ಕೇಳಿದ್ಲು.  ರೀ ಕಸ ತುಂಬೋ ಮಂಕರಿ ಕಾಣಿಸುತ್ತಿಲ್ಲಾ? ಎಲ್ಲಿ ಹಾಕಿದ್ದೀರಾ? ಎಂದಳು ಮಂಜೇಗೌಡ  ಅಲ್ಲೇ ನೀರೊಲೆಯ ಹತ್ರ ಗಳದ ಮೇಲೆ ಹಾಕಿದ್ದೆ ನೋಡೆ ಎಂದ.  ಕಾಳಮ್ಮ ಬಚ್ಚಲು ಹತ್ತಿರ ಹೋಗಿ ನೋಡಿದ್ಲು ಅಲ್ಲೂ ಕಾಣಿಸ್ಲಿಲ್ಲ.  ಬಗ್ಗಿ ನೋಡಿದರೆ ಮಂಕರಿ ಬಚ್ಚಲೊಳಗೆ ಬಿದ್ದಿತ್ತು.  ಓಹೋ ಇಲ್ಲಿ ಬಿದ್ದೈತೆ ಎಂದುಕೊಳ್ಳುತ್ತಾ, ಮಂಕರಿ ತೆಗೆದುಕೊಳ್ಳಲು ಹೋದ್ಲು, ಬಚ್ಚ ಲೊಳಗೆ ಹುಂಜ ಮುದುಡಿಕೊಂಡು ಕುಳಿತುಕೊಂಡಿತ್ತು. ಗಾಬರಿಯಿಂದ ಕಿರಗುಡತೊಡಗಿತು.  ಕಾಳಮ್ಮನಿಗೆ ಒಮ್ಮೆಲೆ ಗಾಬರಿಯೊಂದಿಗೆ ಆಶ್ಚರ್ಯವಾಯಿತು.  ಹಾಳಾದ್ದು, ಇಲ್ಲಿಗೆ ಹೇಗೆ ಬಂತು ಎಂದ್ಕೊಂಡು  ಗಂಡನನ್ನು ಮೆಲ್ಲಗೆ  ಕರೆದಳು  ನೋಡಿ  ಹಾಳಾದ್ದು ಹುಂಜ ಇಲ್ಲಿ ಬಂದು ಸೇರಿಕೊಂಡೈತೆ, ಅವರು ನಿನ್ನೆಯಿಂದ ಇದರ


                                     - 6 -
ಸಲುವಾಗಿ ನಮಗೆ ಸುಮ್ನೆ ಅನ್ಯಾಯವಾಗಿ ಬೈಯ್ತಿದ್ದಾರೆ.  ಹೊರಕ್ಕೆ ಓಡಿಸುತ್ತೀನಿ ಎಂದ್ಲು.  ಆದರೆ ಮಂಜೇಗೌಡ ಹುಂಜವನ್ನು ನೋಡಿದ್ದೆ ತಡ ಏನಾನ್ನಿಸಿತೋ ಗೊತ್ತಿಲ್ಲ  ಹೇಗಿದ್ರೂ ನಿನ್ನೆಯಿಂದ ಸುಮ್ಮುಸುಮ್ನೆ ಬೈದಿದ್ದಾಳೆ. ಹೇಗಿದ್ರೂ ನಾವೇ ಹುಂಜವನ್ನು ಮುರಿದುಕೊಂಡಿರುವುದು ಅಂದ್ಕೊಂಡಿದ್ದಾರೆ.  ಆಗಿದ್ದಾಗಲಿ ಎಂದು ಕೊಂಡು ಹೋಗಿ ಕದಾನ ಮುಂದಕ್ಕೆ ಹಾಕೆ ಎಂದನು. ಕಾಳಮ್ಮ ಏನೋ ಇರಬಹುದು ಎಂದುಕೊಂಡು ಹೋಗಿ ಕದ ಹಾಕಿ ಬರುವಷ್ಟರಲ್ಲಿ ಹುಂಜದ ಕತ್ತು ಒಂದೇ ಏಟಿಗೆ ಕೊಯ್ದು ಬಚ್ಚಲೊಳಗೆ ಹಾಕಿಬಿಟ್ಟ ಮಂಜೇಗೌಡ.  ಹುಂಜದ ದೇಹ ಬಚ್ಚಲು ತುಂಬಾ ಎಗರಾಡುತ್ತಿತ್ತು.  ಒಂದು ಕ್ಷಣ ಕಾಳಮ್ಮನಿಗೆ ಮಾತೇ ಬಾರದಾಯಿತು.  ಗಂಡ ಇದೆಂಥಾ ಕೆಲ್ಸ ಮಾಡಿಬಿಟ್ಟ ಹುಂಜವನ್ನು ಹೊರಗೆ ಓಡಿಸುತ್ತಾನೆಂದುಕೊಂಡ್ರೆ ಕತ್ತನ್ನು ಕೊಯ್ದನಲ್ಲಾ ಎಂದುಕೊಂಡು ಅಲ್ಲಾ ಕಣಿ ನಿಮಗೇನಾಯಿತು? ಹಿಂಗೆ ಮಾಡಿಬಿಟ್ಟರಲ್ಲಾ ಮುಂಚೇನೆ ನಮ್ಮೇಲೆ ಕತ್ತಿ ಮಸೆಯುತ್ತಾರೆ ಅವ್ವ ಮಗ.  ಇದೇನಾದ್ರೂ ಗೊತ್ತಾದ್ರೆ ನಮ್ಮುನ್ನ ಸುಮ್ನೆ ಬಿಟ್ಟಾರಾ?  ಎಂದು ಅಳುತ್ತಲೆ ಕೇಳಿದಳು.  ಮಂಜೇಗೌಡ ಹೋಗೆ ಏನೂ ಆಗಲ್ಲಾ ಸುಮ್ಮುಸುಮ್ನೆ ಬೈಯ್ತಾರೆ ನೋಡು ಈಗ ಹೆಂಗೆ ಮಾಡ್ಬಿಟ್ಟೆ, ಬೈಯ್ಸಿಕೊಂಡಿದ್ದಕ್ಕೂ  ಸಾರ್ಥಕವಾಯಿತು.  ನೀನು ವಸಿ ಜೋಪಾನವಾಗಿ ಸನ್ನೆ ಸೂಕ್ಷ್ಮೆಯಿಂದ ಒಬ್ಬರಿಗೂ ಸುಳಿವು ಕೊಡದೆ ಸಾರು ಮಾಡಿಕೊಂಡು ಮದ್ಯಾಹ್ನ ಹೊಲದ ಹತ್ತಿರ ಊಟ ತಗೊಂಡು ಬಂದ್ಬಿಡು. ನಾನು ಇದನ್ನೆಲ್ಲಾ ಶುದ್ದಮಾಡಿಕೊಟ್ಟು ಮಕ್ಕಳನ್ನು ಕರೆದ್ಕೊಂಡು ಹೊಲಕ್ಕೆ ಹೋಗಿ ರಾಗಿ ಕೊಯ್ಯುತ್ತಿರ್ತಿನಿ ನೀನೇನು ಹೆದರಿಕೊಳ್ಳಬೇಡ ತಿಳಿತೇನಮ್ಮಿ ಎಂದು ಕಾಳಮ್ಮನಿಗೆ ಧೈರ್ಯ ಹೇಳಿ ಮುಂದಿನ ಕೆಲ್ಸ ಶುರುಮಾಡಿದ. ಕಾಳಮ್ಮನಿಗೆ ದಿಕ್ಕೆ ತೋಚದಂತಾಯಿತು ಗಂಡ ಮಾಡಿದ ಈ ಅನಾಹುತ ಏನಾದ್ರೂ ಗೊತ್ತಾದ್ರೆ ಊರಿನಲ್ಲಿ ಮಾನಮಾರ್ವಾದೆನೇ ತೆಗೆದುಬಿಡ್ತಾಳೆ ಅತ್ತೆವ್ವ ಅಂದುಕೊಂಡು ಅಡುಗೆ ಮನೆಯ ಕಡೆಗೆ ನಡೆದ್ಲು.

      ಮಂಜೇಗೌಡ ಹುಂಜದ ರೆಕ್ಕೆಪುಕ್ಕವನ್ನೆಲ್ಲಾ ತರೆದು, ನೀರೊಲೆಯಲ್ಲಿ ತೆಂಗಿನ ಗರಿಯಿಂದ ಬೆಂಕಿ ಹಚ್ಚಿ ಹುಂಜವನ್ನು ಸುಟ್ಟು ನೀಟಾಗಿ ರೆಕ್ಕೆಪುಕ್ಕವನ್ನೆಲ್ಲಾ ಶುದ್ದ ಮಾಡಿದನು.  ಹೊಟ್ಟೆಯ ಒಳಗಿನ ಗಲೀಜು, ರೆಕ್ಕೆಪುಕ್ಕವನ್ನೆಲ್ಲಾ ಬಾಚಿ ಮಂಕಿರಯೊಳಗೆ ಹಾಕಿ ಮೇಲೆ ಬೂದಿ ಹಾಕಿ ಅದರ ಮೇಲೆ ಕೊಟ್ಟಿಗೆ ಕಸ ತುಂಬಿಟ್ಟನು.  ಬಾಡನ್ನು ಕತ್ತಿರಿಸಿ ಒಂದು ಮಡಿಕೆಯೊಳಗೆ ತುಂಬಿಸಿ ಅಡುಗೆ ಮನೆಗೆ ಬಂದು, ಒಂದುಕಡೆ ಬಚ್ಚಿಟ್ಟನು.  ಒಲೆ ಮುಂದೆ ಕೂತು ರೊಟ್ಟಿ ತಟ್ಟುತ್ತಿದ್ದ ಕಾಳಮ್ಮನಿಗೆ ಇದು ಏಕೋ ಸರಿಕಾಣಲಿಲ್ಲ.  ಬೆಂಕಿಯ ಮುಂದೆ ಕೂತಿದ್ದರೂ ಕೈ ಕಾಲು ನಡುಗುತ್ತಿದ್ದವು.  ಏನು ಮಾಡುವುದು ಈ ಕಡೆ ಗಂಡನ ಆಜ್ಞೆಯನ್ನು ಮೀರುವಂತಿರಲಿಲ್ಲ. ಗಂಡನನ್ನು ಬಿಟ್ಟುಕೊಡುವಂತಿರಲಿಲ್ಲ. ಒಳ್ಳೆ ಇಕ್ಕಟ್ಟಿನ ಪರಿಸ್ಥಿತಿ ಕಾಳಮ್ಮನದಾಗಿತ್ತು.  ಮಂಜೇಗೌಡ ಮತ್ತು ಮಕ್ಕಳೆಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಬಂದು ರೊಟ್ಟಿ ತಿಂದು ಹೊಲ ಕೊಯ್ಯಲು ಬೇಕಾದ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೊರಟರು. ಮಕ್ಕಳೆಲ್ಲಾ ಮುಂದೆ ಹೊರಟು ಹೋದವು.  ಮಂಜೇಗೌಡ ಮತ್ತೊಮ್ಮೆ ಕಾಳಮ್ಮನಿಗೆ ಎಲ್ಲವನ್ನು ವಿವರವಾಗಿ ಹೇಳಿ ಪುಕ್ಕ ತುಂಬಿಸಿಟ್ಟಿದ್ದ  ಮಂಕರಿಯನ್ನು ಹೊತ್ಕೊಂಡು ಹೊಲದ ಕಡೆಗೆ ಹೊರಟು ಹೋದನು. ಇನ್ನೂ ಮನೆಯಲ್ಲೇ ಉಳಿದ ಕಾಳಮ್ಮನಿಗೆ ಏನು ಮಾಡಬೇಕೆಂದು ತೊಚದಾಯಿತು. ಮನೆಯಲ್ಲಿ ಹಸುವಿನ ಹಾಲು ಕರೆಯುವುದು, ನೀರು ತರಬೇಕು, ದನಗಳನ್ನು ಬಾರೆಗೆ ಮೇಯಲು ಹೊಡೆಯಬೇಕು ಇವತ್ತೆ ಕಳ್ಳತನದ ಕೋಳಿಸಾರು ಮಾಡಬೇಕು ಎನ್ನುತ್ತಾ ಪೇಚಾಡ ತೊಡಗಿದಳು.

       ಈ ಮನೆಯಲ್ಲಿ ರೊಟ್ಟಿ ತಿನ್ನುತ್ತಾ ಕುಂತಿದ್ದ ಬೆಟ್ಟೇಗೌಡನ ಮನೆಗೆ ಮೊಸರು ಕೇಳುವ ಸಲುವಾಗಿ ಚೆನ್ನಿ ಬಂದ್ಲು.  ಪುಟ್ಟಮ್ಮ ಬಾರೆ ಚೆನ್ನಿ ಏನು ಬೇಕು ಎಂದು ಒಳಕ್ಕೆ ಕರೆದ್ಲು, ಚೆನ್ನಿ  ವಸಿ ಮೊಸರು ಬೇಕಿತ್ತು ಕಣವ್ವಾ ಎಂದಳು.

     ಅಲ್ವೇ ಚೆನ್ನಿ ಹಾಳಾದವರು ಅನ್ಯಾಯವಾಗಿ ನಮ್ಮ ಹುಂಜನ ಮುರ್ಕೊಂಡು ತಿಂದರಲ್ಲೇ ಅವರ ಹೊಟ್ಟೆ ಬಗೆದು ಹಟ್ಟಿಗಿಡಿಯ ಎನ್ನುತ್ತಾ ಪುಟ್ಟಮ್ಮ ತನ್ನ ಶಾಪದ ಶ್ಲೋಕಗಳನ್ನು ಹೇಳತೊಡಗಿದ್ಲು.  ಆಗ ಚೆನ್ನಿ ಒಂದು ಹೊಸ ಬಾಂಬ್ ಹಾಕ್ಬಿಟ್ಟಳು.  ಅವ್ವಾ ನಾನು ಒಪ್ಪಾರಲ್ಲಿ ಕಡ್ಡಿ ಮುರಿತ್ತಿದ್ದಾಗ ಕಾಳವ್ವನ ಕೊಟ್ಟಿಗೆಯ ಒಳಗೆ ಅಡೆ ತುಂಡಿನ್ಮೆಲೆ ಏನೋ ಕತ್ತರಿಸೋ ಶಬ್ದ ಕೇಳಿಸುತಿತ್ತು ಕಣವ್ವಾ ಅಂತಾ ಹುಬ್ಬೇರಿಸುತ್ತಾ ಹೇಳಿದ್ಲು.

     ಚೆನ್ನಿ ಮಾತು ಕೇಳಿದ್ದೆ ತಡ ಬೆಟ್ಟೇಗೌಡನ ಬಾಯಲ್ಲಿ ಅಗಿಯುತ್ತಿದ್ದ ರೊಟ್ಟಿ ತುಂಡು ಹಾಗೆ ನಿಂತ್ಕೊಂಡು ಬಿಡ್ತು.  ಚೆನ್ನಿ ಮಾತಿಗೆ ಪುಟ್ಟಮ್ಮ ಬೆಟ್ಟೇಗೌಡ ಇಬ್ಬರಿಗೂ ಸ್ವಲ್ಪ ತಾಕತ್ತು ಬಂದಂತಾಯ್ತು.


                                  - 7 -
      ನಿಜವಾಗ್ಲು ಹಾಗೆ ಕೇಳಿಸ್ತಾ ಚೆನ್ನಿ, ಹಂಗೇ ನೀನು ವಸಿ ಹೋಗಿ ಬಗ್ಗಿ ನೋಡಬಾರದಿತ್ತೇ ಅದೇನು ಅಂತಾ ಗೊತ್ತಾಗುತ್ತಿತ್ತು ಎಂದನು ಬೆಟ್ಟೇಗೌಡ.  ಯಾಂಗೇ ಹೋಗ್ಲಣ್ಣಾ, ಮಂಜೇಗೌಡ ನನ್ನ ಕಂಡರೆ ಸಿಡುಕ್ತಾನೆ, ಸುಮ್ಮುಸುಮ್ನೆ ನಮ್ಮಾನೆಗೆ ಬರಬ್ಯಾಡ ಅಂತ ಅವತ್ತೆ ಅಂದವ್ನೆ ಎಂದ್ಲು.

     ಇರಲಿ ಬುಡೇ ಚೆನ್ನಿ ಒಳ್ಳೆ ಸುದ್ದಿನೇ ಕೊಟ್ಟೆ ಇವತ್ತು ಅದೇನು ಅಂತಾ ಕಂಡಿಡದ್ದೇ ಬುಡವ್ವಾ, ಅದಕ್ಕೆ ನಿನ್ನ ಸಹಾಯ ಬೇಕು ಅಂದ ಬೆಟ್ಟೇಗೌಡ,  ಓಹೋ ಅದೇನಣ್ಣಾ ಹಂಗಾಂತಿಯಾ ನಾನಿರೋದೆ ನಿಮ್ಮ ಕಡೆಗೆ ಅಲ್ವಾ, ಅದೇನಂತಾ ಹೇಳು ನಾನು ಮಾಡೇ ತೀರುತ್ತೇನೆ ಎಂದು ಸೈನಿಕಳಂತೆ ಆಜ್ಞೆಗೆ ಕಾದು ನಿಂತಳು.  ಬೆಟ್ಟೇಗೌಡ, ಪುಟ್ಟಮ್ಮ ಇಬ್ಬರು ಒಬ್ಬರಿಗೊಬ್ಬರು ಮೆಲ್ಲಗೆ ಮಾತಾಡಿಕೊಂಡು ನಂತರ ಪುಟ್ಟಮ್ಮ ಚೆನ್ನಿ ಕರೆದು ಕಿವಿಯ ಹತ್ರ ಪಿಸ ಪಿಸ ಅಂತಾ ಏನೋ ಹೇಳಿ ಅಡುಗೆ ಮನೆಗೋಗಿ ಬಟ್ಟಲಿಗೆ ಮೊಸ್ರು ಹಾಕಿ ಕೊಟ್ಲು.  ಚೆನ್ನಿ ಮೊಸ್ರು ತೆಗೆದುಕೊಂಡು ತನ್ನ ಮನೆಗೆ ಹೋದ್ಲು.  ಇದನ್ನೆಲ್ಲಾ ಗಮನವಿಟ್ಟು ನೋಡುತ್ತಿದ್ದ ತಾಯಮ್ಮನಿಗೆ ಏಕೋ ಕಾಳಮ್ಮನ ಮೇಲೆ ಅನುಕಂಪ ಮೂಡಿತು.  ಎಷ್ಟಾದ್ರೂ ಅವಳು ತನಗೆ ಸ್ವಂತ ಅಕ್ಕನಿಗಿಂತ ಹೆಚ್ಚಿನವಳಾಗಿದ್ದ್ಲು. ಹುಂಜವನ್ನು ತಿಂದವರು ಬೇರಾರು ಅಲ್ವಾಲ್ಲಾ? ತನ್ನ ಭಾವ, ಅಕ್ಕ ಮತ್ತು ಮಕ್ಕಳು ತಾನೇ ? ತಾನು ತನ್ನ ಗಂಡ ಇಷ್ಟೊಂದು  ದುಡಿದಿಟ್ಟಿದ್ದು ಯಾರಿಗೆ? ತನಗೆ ಮಕ್ಕಳಿಲ್ಲ ಮರಿಯಿಲ್ಲ, ತಮ್ಮದೆಲ್ಲಾ ಕೊನೆಗಾಲಕ್ಕೆ ಯಾರಿಗೆ ತಾನೇ ಕೊಡುವುದು, ಮನೆಯಲ್ಲಿ ಎಲ್ಲಾ ಇದ್ರೂನು ನೆಮ್ಮದಿ ಇಲ್ಲ ಅವರ ಮನೇಲಿ ಎಲ್ಲಾ ಇದೇ ಅದಕ್ಕೆ ಕಾರಣ ಅವರ ಒಳ್ಳೆ ಮನಸ್ಸುಗಳು, ತನ್ಮನೆಯಲ್ಲಿ ಕೆಟ್ಟ ಮನಸ್ಸಿನ ಅತ್ತೆ ಸ್ವಂತ ಬುದ್ಧಿಯಿಲ್ಲದ ಗಂಡ ಇವರ ನಡುವೆ ದಿನವೂ ಕೊರಗುವ ನಾನು ಇದೆಲ್ಲಾ ಯಾವ ಸೌಭಾಗ್ಯಕ್ಕೆ ಎಂದುಕೊಂಡಳು. ಏನಾದ್ರೂ ಆಗಲಿ ಅವರು ಯಾವುದೇ ಕಾರಣಕ್ಕೂ ಸಿಕ್ಕಿ ಹಾಕಿಕೊಳ್ಳಬಾರದೆಂದು ಮನಸ್ಸಿನಲ್ಲೇ ದೇವರಿಗೆ ಹರಕೆ ಕಟ್ಟಿಕೊಂಡಳು. ಸಮಯ ಸಿಕ್ಕರೆ ಕಾಳಮ್ಮನಿಗೆ ಈ ವಿಷಯವಾಗಿ ಹೇಳಬೇಕೆಂದು ಕೊಂಡಳು.

     ಬೆಟ್ಟೇಗೌಡ ಮತ್ತು ಪುಟ್ಟಮ್ಮ ಇಬ್ಬರು ಗೂಢಾಚಾರಕ್ಕೆ ತಯಾರಾದ್ರು,  ಕಾಳಮ್ಮನಿಗೆ ಅವತ್ತೆ ಅಗ್ನಿ ಪರೀಕ್ಷೆಯ ದಿನವಾಗಿತ್ತು. ಗಂಡ-ಮಕ್ಕಳು ಹೊಲಕ್ಕೆ ಹೋದ್ಮೇಲೆ ಮಿಕ್ಕೆಲ್ಲಾ ಕೆಲಸವನ್ನೆಲ್ಲಾ ಮಾಡಿದ್ಲು.  ಮನೆಯಲ್ಲಿ ನೀರಿರಲಿಲ್ಲ  ನೀರು ತರಲು ಬಾವಿಗೆ ಹಿತ್ತಾಳೆಯ ಎರಡು ಕೊಡಗಳನ್ನು ತೆಗೆದುಕೊಂಡು ಬಾಗಿಲಿಗೆ ಬೀಗ ಬಿಗಿದು ಹೋಗಿ ಎರಡು-ಮೂರು ಬಾರಿ ನೀರು ತಂದು ಅಡುಗೆ ಮನೆಯ ಹಂಡೆಗೆ ತುಂಬಿಸಿಕೊಂಡಳು.  ಹಾಲು ಕರೆದು, ದನಗಳನ್ನೆಲ್ಲಾ ಮೇಯಲು ಹುಲ್ಲು ಬಾರೆಗೆ ಹಟ್ಟಿದಳು.  ಆಗಲೇ ಸೂರ್ಯ ನೆತ್ತಿ ಮೇಲೆ ಬರಲು ಇನ್ನು ಎರಡು ಗಂಟೆ ಇತ್ತು.  ಇನ್ನು ಅಡುಗೆಗೆ ಇಡಬೇಕೆಂದುಕೊಂಡು ಸಣ್ಣ ಈರುಳ್ಳಿ ತೆಗೆದುಕೊಂಡು ಸಿಪ್ಪೆ ಸುಲಿಯ ತೊಡಗಿದ್ಲು. ಇದ್ದಕ್ಕಿದ್ದ ಹಾಗೇ ಚೆನ್ನಿ ಮನೆಯ ಒಳಕ್ಕೆ ಬಂದೇ ಬಿಟ್ಟಳು. ಬಂದವಳೇ ಅಕ್ಕಾ ವಸಿ ಬೆಂಕಿ ಕೊಡುತ್ತೀಯಾ ಎಂದು ಬೆರಣಿಯನ್ನು ತೋರಿಸಿದಳು. ಕಾಳಮ್ಮನಿಗೆ ಇದು ಮೊದಲನೆ ಪರೀಕ್ಷೆ ಅಂತಾ ಗೊತ್ತಾಯಿತು.  ಆಗಲೇ ಸ್ವಲ್ಪ ಹುಷಾರಾದಳು.  ಕೊಡ್ತೀನಿ ಇರು ಎಂದು ಅವಳ ಕೈಯಿಂದ ಬೆರಣಿ ತೆಗೆದುಕೊಂಡು ಅಡುಗೆ ಮನೆಗೆ ಹೋದಳು.  ಕಾಳಮ್ಮನ ಹಿಂದೆಯೇ ಚೆನ್ನಿನೂ ಹೋದ್ಲು.  ಕಾಳಮ್ಮ ಒಲೆಯಲ್ಲಿದ್ದ ಕೆಂಡವನ್ನು ಬೆರಣಿಯ ಮೇಲೆ ಹಾಕಿ, ಬೆರಣಿ ಪುಡಿಯನ್ನು ಹಾಕಿ ಚೆನ್ನಿ ಕೈಗೆ ಕೊಡಲು ಹೋದಳು.

     ಅಕ್ಕಾ ಏನು ಹೆಸರು ಅಂದಳು, ಕಾಳಮ್ಮ ತಡವರಿಸದೆ  ಮೊಳಕೆ ಹುಳ್ಳಿಕಾಳು, ಮುಳ್ಳಗಾಯಿ, ಗೆಂಡೆ ಅಂದ್ಲು, ಚೆನ್ನಿ ಕಣ್ಣು ಆಗಲೇ ಅಡುಗೆ ಮನೆಯನ್ನು ಎರಡು-ಮೂರು ಸುತ್ತು ಸುತ್ತಿ ಬಂದಿದ್ದವು,  ಅವಳ ಹದ್ದಿನ ಕಣ್ಣಿಗೆ ಅಂತಾದೇನು ಕಾಣಿಸ್ಲಿಲ್ಲ. ಇನ್ನೂ ಹೆಚ್ಚಿಗೆ ಏನೂ ಕೇಳಲು ಅವಕಾಶವೇ ಮಾಡಿಕೊಡದೇ ಕಾಳಮ್ಮ ಹೋಗಿ ಒಳಕಲ್ಲು ತೊಳೆಯತೊಡಗಿದಳು,  ಚೆನ್ನಿ ಸುಮ್ನೆ ಹೊರಗೆ ಹೋದಳು.

    ಕಾಳಮ್ಮ ಏನೇ ಅಡುಗೆ ಮಾಡಿದ್ರೂ ಬಹಳ ಅಚ್ಚುಕಟ್ಟು,  ಬಹಳ ರುಚಿಯಾಗಿ ಮಾಡುತ್ತಿದ್ದಳು  ಇವತ್ತು ಕೋಳಿಸಾರು ಬೇರೆ ಕೇರಿಯಲ್ಲಿ ಘಂ ಎನ್ನುವಂತೆ ಮಾಡುವಳು.  ಆ ದಿನ ಸ್ವಲ್ಪ ಕಡಿಮೆ ಮಸಾಲೆನೇ ಹಾಕಿ ಹೆಚ್ಚಿಗೆ ಘಂ ಎನ್ನಿಸದೆ ಕೋಳಿಸಾರು ಮಾಡಲು ನಿರ್ಧರಿಸಿದಳು.  ಒಂದು ಕಣ್ಣನ್ನು ಬಾಗಿಲ ಬಳಿ ಇಟ್ಟು, ಇನ್ನೊಂದು ಕಣ್ಣಲ್ಲಿ ಅಡುಗೆ ಮಾಡ್ತಿದ್ದಳು.  ಯಾರಾದ್ರು ಬಂದ್ರೆ ಏನು ಮಾಡುವುದೆಂಬುದೇ ಅವಳಿಗೆ ಯೋಚನೆಯಾಗಿತ್ತು.  ಹೇಗೋ ಬೇಗ ಬೇಗನೆ ಕೋಳಿಸಾರು ಮಾಡಿ, ಒಂದು ಕಡೆ ಮುಚ್ಚಿಟ್ಟಳು. ಹಿಟ್ಟು ತಿರುವಿ ಬಿಸಿ-ಬಿಸಿ ಮುದ್ದೆ ಕಟ್ಟಿಕೊಂಡು, ಅನ್ನ ಮತ್ತು ಮುದ್ದೆಯನ್ನು ಸಿಲ್ವರ್ ಪಾತ್ರೆಯೊಳಗೆ ತುಂಬಿಕೊಂಡು, ಕೋಳಿಸಾರನ್ನು  ಮಡಿಕೆ  ಸಮೇತ  ಊಟ  ಹೊತ್ತುಕೊಂಡು  ಹೋಗುವ ಮಂಕರಿಗೆ ಇಟ್ಟುಕೊಂಡು ಅದರ


                                     - 8 -
ಮೇಲೆ ತಟ್ಟೆಗಳಿಂದ ಮುಚ್ಚಿಟ್ಟಳು.  ಅದರ ಮೇಲೆ ಎರಡು ಮಡಿಕೆ ಬಿಳಿ ಪಂಚೆಯನ್ನು ಮಡಿಸಿ ಸುತ್ತಲು ಬಿಗಿಯಾಗಿ ಕಟ್ಟಿದಳು.  ನೀರಿಗೆ ಅಂತಾ ಒಂದು ಗಡಿಗೆಯನ್ನು ಒಂದು ಹಿತ್ತಾಳೆ ಚೊಂಬನ್ನು ಇಟ್ಟುಕೊಂಡು ಹೆಚ್ಚು ಹೊತ್ತು ಮನೆಯಲ್ಲಿ ಇದ್ರೆ ಅಪಾಯ ಅಂತ ತಿಳಿದು ಬೇಗಬೇಗ ಹೊಲಕ್ಕೆ ಹೋಗಲು ತಯಾರಿ ಮಾಡಿಕೊಂಡು ಹೊರಟು ನಿಂತಳು.  ಮನೆಯ ಬೀಗ ತೆಗೆದ್ಕೊಂಡು ಬುತ್ತಿ ಸಮೇತ ಹೊರಗಡೆ ಬಂದು ಇನ್ನೇನು ಬಾಗಿಲು ಎಳೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಚೆನ್ನಿ ಬೆನ್ನಿನ ಹಿಂದೆ ಪ್ರತ್ಯಕ್ಷವಾದ್ಲು.  ಕೈಯಲ್ಲಿ ಒಂದು ಬಟ್ಟಲು ಬೇರೆ ಇತ್ತು.  ಇದು ಕಾಳಮ್ಮನಿಗೆ ಎರಡನೇ ಪರೀಕ್ಷೆ ಅಂತಾ ಗೊತ್ತಾಯಿತು.  ಏನು ಮಾಡುವುದಕ್ಕೂ ಆಗುವುದಿಲ್ಲ  ಎಂದುಕೊಂಡಳು.

     ಅಕ್ಕಾ ವಸಿ ಸಾರು ಕೊಡ್ತಿಯಾ? ಹುಳ್ಳಿಕಾಳು ಸಾರೆಂದ್ರೆ ನನ್ಮಗನಿಗೆ ಬಲು ಇಷ್ಟ ಅದೂ ಅಲ್ಲದೆ ನಾನು ಇನ್ನೂ ಹೆಸರು ಮಾಡುವುದು ತಡವಾಗುತ್ತೆ  ಎನ್ನುತ್ತಾ ಬಟ್ಟಲನ್ನು ಕಾಳಮ್ಮನ ಬಳಿಗೆ ಹಿಡಿದಳು.  ಚೆನ್ನಿ ಮಾತು ಕೇಳಿ ಕಾಳಮ್ಮನಿಗೆ ಭೂಮಿನೇ ಬಾಯಿಬಿಟ್ಟಂತೆ ಕಾಣಿಸುತಿತ್ತು.  ತಲೆ ಮೇಲಿದ್ದ ಊಟದ ಬುತ್ತಿ ಸಮೇತ ಅಡುಗೆ ಮನೆಗೆ ಹೋದಳು.  ಚೆನ್ನಿ ಕೊಟ್ಟ ಬಟ್ಟಲನ್ನು ಕೈಯಲ್ಲಿ ಹಿಡಿದುಕೊಂಡೇ ಹೋದಳು.  ಚೆನ್ನಿ ಬಾಗಿಲ ಬಳಿನೇ ನಿಂತಿದ್ದಳು. ಕಾಳಮ್ಮನಿಗೆ ಏನು ಮಾಡುವುದೆಂದು ತೋಚದಂತಾಯಿತು.  ಏನು ಮಾಡಲಿ ಅಂತಾ ಆ ಕಡೆ ಈ ಕಡೆ ನೋಡಿ ದೇವರನ್ನು ಮನದಲ್ಲೇ ನೆನೆದಳು ತಕ್ಷಣ ಅವಳಿಗೆ ದೇವರೇ ವರಕೊಟ್ಟಂತಾಯ್ತು.  ಅದೇನೆಂದರೆ ಹಿಂದಿನ ರಾತ್ರಿ ಮಾಡಿದ್ದ ಮೊಳಕೆ ಹುಳ್ಳಿ ಸಾರು ತುಂಬಾ ಚೆನ್ನಾಗಿತ್ತು ಎಂದು ಕಾಳಮ್ಮನ ಎರಡನೇ ಮಗಳು ಉಳಿದಿದ್ದ ಸ್ವಲ್ಪ ಸಾರನ್ನು ಸಣ್ಣ ಬಟ್ಟಲಿಗೆ ಹಾಕಿ ಎಡಕಲು ಕೆಳಗೆ ಇಟ್ಟಿದ್ದಳು.  ಬೆಳಗ್ಗೆ ರೊಟ್ಟಿ ಜೊತೆಗೆ ತಿನ್ನಬೇಕೆಂದುಕೊಂಡಾಗ ಆಕಸ್ಮಾತಾಗಿ ಅದು ಹುಡುಗಿಗೆ ಮರೆತು ಆ ಸಾರನ್ನು ಅಲ್ಲೇ ಬಿಟ್ಟಿತ್ತು.  ಆ ಬಟ್ಟಲು ಕಾಳಮ್ಮನ ಕಣ್ಣಿಗೆ ಬಿತ್ತು. ಕಾಳಮ್ಮನಿಗೆ ಹೋದ ಜೀವ ಬಂದಾಯಿತು.  ಬುತ್ತಿಯನ್ನು ಅಲ್ಲೇ ಕೆಳಗೆ ಇಳಿಸಿ ಸಾರನ್ನು ತೆಗೆದು ಕೆಂಡದ ಮೇಲಿಟ್ಟು ಸ್ವಲ್ಪ ಬಿಸಿಯಾಗುತ್ತಿದ್ದಂತೆ ಚೆನ್ನಿ ಬಟ್ಟಲಿಗೆ ಬಗ್ಗಿಸಿಕೊಂಡು ಬಂದು ಚೆನ್ನಿ ಕೈಗಿಟ್ಟಳು.  ಚೆನ್ನಿ ಸಾರನ್ನು ಬೆಕ್ಕಸ ಬೆರಗಾಗಿ ಮೇಲೆ ಕೆಳಗೆ ಮೂಸಿ ನೋಡಿದಳು ಅದು ನಿಜವಾಗ್ಲು ಮೊಳಕೆ ಹುಳ್ಳಿ ಸಾರಾಗಿತ್ತು.  ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹೋದಳು.  ಕಾಳಮ್ಮ ಆಗ ಸ್ವಲ್ಪ ನಿಟ್ಟುಸಿರುಬಿಟ್ಟಳು.  ಮತ್ತೆ ಬೇಗ ಬೇಗ ಮನೆಗೆ ಬೀಗ ಹಾಕಿಕೊಂಡು ಬುತ್ತಿ ಹೊತ್ಕೊಂಡು ಹೊಲದ ಕಡೆಗೆ ಬರಬರನೆ ಹೆಜ್ಜೆ ಹಾಕಿದಳು.  ಅತ್ತ ಹೊಲ ಕೊಯ್ಯತ್ತಿದ್ದ ಮಂಜೇಗೌಡ ತನ್ನ ಐದು ಮಕ್ಕಳಿಗೂ ಆಗಲೇ ಕೋಳಿ ಸಾರಿನ ಬಗ್ಗೆ ನೀತಿ ಭೋದನೆ ಮಾಡಿದ್ದ.  ಯಾವುದೇ ಕಾರಣಕ್ಕೂ ಎಲ್ಲೂ ಯಾರ ಹತ್ತಿರ ಬಾಯಿ ಬಿಡಬಾರದೆಂದು ತಾಕಿತ್ತು ಮಾಡಿದ್ದನು.  ಕಾಳಮ್ಮ ಸೀದಾ ಬುತ್ತಿ ಹೊತ್ಕೊಂಡು ಹೊಲದ ಬದಿಯಲ್ಲಿ ಇದ್ದ ಹಲಸಿನ ಮರದ ಕೆಳಗಿಟ್ಟು, ಉಸ್ಸೆಂದು ಕುಳಿತುಕೊಂಡಳು.  ಕಾಳಮ್ಮ ಬಂದಿದ್ದನ್ನು ನೋಡಿ ಮಂಜೇಗೌಡ ಹೆಂಡತಿ ಬಳಿಗೆ ಬಂದನು.  ಮಂಜೇಗೌಡನ ನೋಡಿದ ಕೂಡಲೇ ಕಾಳಮ್ಮ ಕೋಪದಿಂದ  ಅಲ್ಲಾ ನೀವು ಮಾಡಿದ್ದು ಸರೀನಾ, ಯಾವಳಾದಾದ್ರು ತಲೆ ತೆಗಿತ್ತಿರಾ ನೀವು ಇವತ್ತು ನಾನು ಅದೆಷ್ಟು ಕಷ್ಟಪಟ್ಟಿದ್ದೀನಿ ಅಂತಾ ಆ ದೇವರಿಗೆ ಗೊತ್ತು. ಏನಾದ್ರು ಇವತ್ತು ಒಂಚೂರು ಗೊತ್ತಾಗಿದ್ರು ಊರಲ್ಲಿ ನಮ್ಮ ಮಾನ ಮಾಯರ್ಾದೆ ಹೋಗುತ್ತಿತ್ತು ಗೊತ್ತಾ ನಿಮಗೆ ಎಂದು ಜೋರಾಗಿ ದಬಾಯಿಸಿದಳು.  ಮಂಜೇಗೌಡನಿಗೆ ಹೆಂಡತಿ ಸಂಕಟ ಏನೆಂದು ಗೊತ್ತಾಯ್ತು, ಆದರೂ ಅವುಗಳನ್ನೆಲ್ಲಾ ನಿಭಾಯಿಸಿಕೊಂಡು ಜಾಣ್ಮೆಯಿಂದ ಬಂದಿದ್ದನ್ನು ಕಂಡು ಮನದಲ್ಲೇ ಸಂತೋಷಗೊಂಡನು.  ಆದರೂ ಅದನ್ನು ತೋರ್ಪಡಿಸದೆ  ಇರಲಿ ಬಿಡೇ ಯಾವಾಗ್ಲಾದ್ರೂ ಈ ತರ ಮಾಡಿದ್ನಾ?  ಇವತ್ತು ಅದೇನೋ ಗೊತ್ತಿಲ್ಲ ಬಾಳಸಿಟ್ಟು ಬಂದು ಹಂಗೆ ಮಾಡ್ಬಿಟ್ಟೆ.  ಹೋಗಲಿ ಸುಮ್ನೆ ಆಗ್ಬಿಡು ಎಂದನು. ಕಾಳಮ್ಮನು ಸಹ ಇನ್ನೇನು ಮಾಡುವುದು ಆಗಿದ್ದಾಗಿ ಹೋಯ್ತು ಎಲ್ಲಾ ಮುಗಿತ್ತಲ್ಲಾ ಅಂದುಕೊಂಡು ಮಗನ ಕರೆದು ಹಳ್ಳಕ್ಕೋಗಿ ಊಟಕ್ಕೆ ನೀರು ತರಲು ಗಡಿಗೆ ಕೊಟ್ಟಳು.  ಆ ಹುಡುಗ ನೀರು ತರಲು ಹೋಯ್ತು.  ಮಂಜೇಗೌಡ ಕೆಲಸ ಮಾಡ್ತಿದ್ದ ಮಕ್ಕಳನ್ನೆಲ್ಲಾ ಬನ್ನಿರ್ಲಾ ಮಕ್ಕಳಾ ಬೇಗ ಉಂಡು ಬಿಡೋಣ ಮತ್ತೆ ಯಾರಾದ್ರು ಬಂದಾರು ಎಂದನು ಮಕ್ಕಳೆಲ್ಲಾ ಕೆಲ್ಸವನ್ನು ಅಲ್ಲೇ ಬಿಟ್ಟು ಬಂದವು.  ನೆತ್ತಿ ಮೇಲೆ ಬಿಸಿಲು ಸುಡುತಿತ್ತು ಎಲ್ಲರೂ ಹಲಸಿನ ಮರದ ಕೆಳಗೆ ಊಟ ಮಾಡಲು ಕುಂತರು.  ನೀರು ತರಲು ಹೋಗಿದ್ದ ಹುಡುಗನು ಸಹ ಬಂದು ಸೇರಿಕೊಂಡನು.  ಎಲ್ಲರೂ ಕೈ ತೊಳೆದುಕೊಂಡು ಹಿತ್ತಾಳೆ ತಟ್ಟೆಗಳನ್ನು ತೆಗೆದುಕೊಂಡು ಊಟಕ್ಕೆ ಕುಂತರು.  ಕಾಳಮ್ಮ ಎಲ್ಲರಿಗೂ ಬಡಿಸಿದಳು ಬಿಸಿ ಮುದ್ದೆ, ಕೋಳಿ ಸಾರು ಎಲ್ಲರೂ ಚಪ್ಪರಿಸಿ ಹೊಡೆದರು.  ಮಂಜೇಗೌಡ ಕಾಳಮ್ಮನಿಗೆ  ನೀನು ಈಗಲೇ ಉಣ್ಣು ಮತ್ತೆ ತಡ ಮಾಡಬೇಡ ಒಟ್ಟಿಗೆ ಹಾಗಿ ಹೋಗಲಿ ಎಂದ ಕಾಳಮ್ಮನಿಗೆ ಗಂಡನ ಮಾತು ಸರಿ ಅನ್ನಿಸಿತು. ತಾನು ತಟ್ಟೆ ಹಾಕಿಕೊಂಡು







                                   - 9 -
ಉಂಡಳು.  ಎಲ್ಲರದು ಊಟವಾಯಿತು.  ಹುಡುಗರೆಲ್ಲಾ ಬಹಳ ಖುಷಿಯಿಂದ ಮತ್ತೆ ಹೊಲದಲ್ಲಿ ರಾಗಿ ಕುಯ್ಯಲು ಹೋದವು.  ಕಾಳಮ್ಮ ಪಾತ್ರೆಯನ್ನು ಮಂಕರಿಗೆ ಇಟ್ಟಳು.  ಉಳಿದ ಸ್ವಲ್ಪ ಸಾರನ್ನು ಅಲ್ಲೇ ಹೊಲದೊಳಗೆ ಚೆಲ್ಲಿ ನೀರು ಹಾಕಿ ತೊಳೆದು ಇಟ್ಟುಕೊಂಡಳು.  ಮಂಜೇಗೌಡ ಎಲೆ ಅಡಿಕೆ ಇದ್ದರೆ ಕೋಳಿ ಸಾರು ಉಂಡಿದ್ದಕ್ಕೂ ಕಳೆಕಟ್ಟುತ್ತಿತ್ತು  ಅಂದುಕೊಂಡು ಹಲ್ಲಿಗೆ ಕಡ್ಡಿ ಚುಚ್ಚುತ್ತಾ ಕೂತನು.  ಕಾಳಮ್ಮ ಎದ್ದು ತಾನು ಸಹ ಕೆಲಸ ಮಾಡಲು ಶುರುಮಾಡಿದಳು ಅಷ್ಟೋತ್ತಿಗೆಲ್ಲಾ ದೂರದಲ್ಲಿ ಯಾರೋ ಇಬ್ಬರು ಒಂದು ನಾಯಿ ಸಮೇತ ಬರುತ್ತಿರುವುದು ಕಾಣಿಸಿತು.  ಕಾಳಮ್ಮನಿಗೆ ಇದು ಮೂರನೇ ಪರೀಕ್ಷೆ ಅಂತಾ ಗೊತ್ತಾಗಿ ಗಂಡನಿಗೆ ಎಚ್ಚರಿಸಿದಳು.  ಮಂಜೇಗೌಡನಿಗೆ ಬರುತ್ತಿರುವರು ಬೆಟ್ಟೇಗೌಡ, ಚೆನ್ನಿ ಗಂಡ ಮತ್ತು ಅವನು ಸಾಕಿರೋ ನಾಯಿ ಅಂತಾ ಗೊತ್ತಾಯ್ತು.  ಹೆಂಡತಿಗೆ ನೀನು ಹೋಗಿ ಸುಮ್ನೆ ನಿನ್ನ ಪಾಡಿಗೆ ಹೊಲ ಕೂಯ್ಯಿ ಹೋಗು ಅಂತಾ ಹೇಳಿ, ತಾನು ಎದ್ದು ಊಟ ಮಾಡಿದ ಜಾಗದಲ್ಲಿ ಬಿದ್ದಿದ್ದ ಎಲ್ಲಾ ಕೋಳಿ ಮೂಳೆಗಳನ್ನು ಒಂದು ಬಿಡದ ಹಾಗೆ ಬಳಿದು ಒಂದೆ ಕಡೆ ಗುಡ್ಡೇ ಮಾಡಿದ ಕುಡುಗೋಲಿನಿಂದ ಒಂದು ಸಣ್ಣ ಗುಂಡಿ ತೆಗೆದು ಅದರೊಳಗೆ ಮೂಳೆಗಳನೆಲ್ಲಾ ಹಾಕಿ ಮಣ್ಣು ಮುಚ್ಚಿದ ಅದರ ಮೇಲೆ ಅಲ್ಲೆ ಬಿದ್ದಿದ್ದ ಕಳೆ ಹುಲ್ಲನ್ನು ಕಿತ್ತು ಹಾಕಿದ ಅದರ ಮೇಲೆ ತನ್ನ ಪಂಚೆಯನ್ನು ಹಾಸಿ, ಹೆಗಲ ಮೇಲಿದ್ದ ಟವಲನ್ನು ಸಣ್ಣ ದಿಂಬಿನಂತೆ ಮಾಡಿಕೊಂಡು, ಕಾಲು ಚಾಚಿಕೊಂಡು ಮಲಗಿಬಿಟ್ಟ ಮಂಜೇಗೌಡ.

      ಬೆಟ್ಟೇಗೌಡ ಪಕ್ಕದಲ್ಲೇ ಇದ್ದ ತನ್ನ ಹೊಲಕ್ಕೆ ಹೋದ ಚೆನ್ನಿ ಗಂಡ ಮಾತ್ರ ತನ್ನ ನಾಯಿ ಜೊತೆ ಮಂಜೇಗೌಡನ ಹತ್ತಿರಕ್ಕೆ ಬಂದ, ಬಂದವನೇ  ಅಣ್ಣಾ ಏನು ಹಿಂಗೇ ಮಲಕೊಂಡು ಬಿಟ್ಟಿದ್ದೀಯಾ, ಉಂಡಾಯಿತಾ ? ಅಂದನು. ಹ್ಞೂ ಆಯಿತು ಕಣ್ಲಾ, ಅದೇನು ಇವತ್ತು ನಮ್ಮ ಹೊಲದ ಹತ್ತಿರ ಬಂದಿದ್ದೀಯಾ ? ಎಂದನು ಮಂಜೇಗೌಡ.

     ಹಂಗೇನಿಲ್ಲಾ ಇಲ್ಲೇ ನಮ್ಮ ಹೊಲದ ಕಡೆ ಹೋಗುತ್ತಿದ್ದೆ, ನಿನ್ನ ನೋಡಿದೆನಲ್ಲಾ ಒಂದು ಬೀಡಿ ಕೇಳೋಣ ಅಂತಾ ಬಂದೆ ಎನ್ನುತ್ತಾ ತಲೆ ಕೆರೆದ.  ಆಗಲೇ ಅವನ ಬೇಟೆ ನಾಯಿ ಕೋಳಿ ಸಾರಿನ ವಾಸನೆ ಜಾಡು ಹಿಡಿದು ಮೂಳೆಗಳಿಗೆ ಹುಡುಕಾಟ ನಡೆಸುತ್ತಿತ್ತು.  ಸುತ್ತಲೂ ಒಂದು ಸಲ ಮೂಸಿಕೊಂಡು ಬಂತು.  ಮೂಳೆಯ ವಾಸನೆಗೆ ಅದರ ನಾಲಿಗೆಯಲ್ಲಿ ಜೊಲ್ಲು ಸುರಿಯ ತೊಡಗಿತು.  ಏನು ಮಾಡುವುದು ಕೋಳಿ ಮೂಳೆಗಳು ಮಂಜೇಗೌಡನು ಮಲಗಿರುವ ನೆಲದ ಕೆಳಗೆ ಅಡಗಿ ಕುಳಿತುಕೊಂಡಿವೆ ಎಂದು ಬಾಯ್ಬಿಟ್ಟು ಹೇಳುವುದಕ್ಕೆ ಮಾತು ಬರ್ತಿಲ್ಲ. ಬರೀ ಬೊಗಳಬೇಕು. ಬೊಗಳಿದರೆ ಅದು ಯಾರಿಗೆ ತಾನೆ ಅರ್ಥವಾಗುತ್ತದೆ?  ಎಂದು ಯೋಚಿಸುತ್ತಾ ನಿಂತುಕೊಂಡಿತು. ಮಂಜೇಗೌಡನ ಚಾಣಾಕ್ಷತನಕ್ಕೆ ಮೆಚ್ಚಿ ತನ್ನ ಮುಂದಿನ ಕಾಲುಗಳಿಂದ ನೆಲವನ್ನು ಕೆರೆಯತೊಡಗಿತು.

     ಮಂಜೇಗೌಡ  ಈ ನಾಯಿ ಯಾಕ್ಲಾ ಹಿಂಗೇ ನೆಲ ಕೆರೆಯುತ್ತೆ ಓಡಿಸ್ಲಾ ಅತ್ಲಾಗೆ ಎಂದು ಅಲ್ಲೇ ಇದ್ದ ಸಣ್ಣ ಕಲ್ಲಿನಿಂದ ನಾಯಿಗೆ ಹೊಡೆದ ನಾಯಿ ಕೂಯಿಗುಡುತ್ತಾ ಇಲ್ಲಿ ತನ್ನದು ಏನೂ ನಡೆಯುವುದಿಲ್ಲ ಎಂದು ದೂರಕ್ಕೆ ಹೋಗಿ ನಿಂತಿತ್ತು.  ಮಂಜೇಗೌಡನಿಂದ ಬೀಡಿ ತೆಗೆದುಕೊಂಡು ಸೇದಿ ಹೊಗೆ ಬಿಡುತ್ತಿದ್ದ ಚೆನ್ನಿ ಗಂಡ ಒಮ್ಮೆ ಸುತ್ತಲು ಸೂಕ್ಷ್ಮವಾಗಿ ಗಮನಿಸಿದ.  ಎಲ್ಲೂ ಕೋಳಿ ಸಾರಿನ ಸುಳಿವೆ ಸಿಗಲಿಲ್ಲ.  ಇನ್ನು ಹೆಚ್ಚು ಹೊತ್ತು ಇಲ್ಲೇ ಇದ್ರೆ ನಾಯಿಗೆ ಆದ ಗತಿ ನನಗೂ ಮಂಜೇಗೌಡ ಮಾಡುತ್ತಾನೆ ಎಂದುಕೊಂಡು ತನ್ನ ಹೊಲದ ಕಡೆಗೆ ದಾರಿ ಹಿಡಿದ.  ನಾಯಿ ಅವನನ್ನು ಹಿಂಬಾಲಿಸಿತು.  ಅವನು ಆ ಕಡೆ ಹೋದ ಮೇಲೆ ಮಂಜೇಗೌಡ ಶೇಷಶಯನನ ಪೋಸ್ನಲ್ಲಿ ಹಾಗೇ ಸಣ್ಣ ಮಂಪರಿನ ನಿದ್ದೆಗೆ ಜಾರಿದ. ಆ ನಿದ್ದೆಯಲ್ಲಿ ಕನಸೊಂದು ಬಿತ್ತು.  ಹೊಟ್ಟೆಯೊಳಗೆ ಇದ್ದ ಹುಂಜ ಎದ್ದು ಕೂಗಲು ಸಿದ್ಧವಾಗತೊಡಗುತ್ತಿದ್ದಂತೆ ಮಂಜೇಗೌಡನ ಮನಸಾಕ್ಷಿ ಹೆದರಿ ಹುಂಜದ ಎದುರು ವಿನಯ ಪೂರ್ವಕವಾಗಿ ಇದೊಂದು ಸಲ ಮನ್ನಿಸಿ ಬಿಡು ಇನ್ನೊಮ್ಮೆ ಈ ತರ ಮಾಡುವುದಿಲ್ಲ ದಯವಿಟ್ಟು ಕೂಗಬೇಡ ಎಂದು ಹುಂಜದ ಕತ್ತನ್ನು ಅದುಮಿ ಹಿಡಿದುಕೊಂಡನು. ಅಂತು ಕೊನೆಗೂ ಹುಂಜಕ್ಕೆ ಸಾಕ್ಷಿ ಹೇಳುವರೆ ಸಿಗಲಿಲ್ಲ.      





No comments:

Post a Comment